ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಬಲಿಷ್ಠ ಒಗ್ಗಟ್ಟನ್ನು ಸಹಿಸಲಾಗುತ್ತಿಲ್ಲ: ಎನ್.ಚಲುವರಾಯಸ್ವಾಮಿ

Political News: ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರದ ಜನಪರ ಆಡಳಿತ ಹಾಗೂ ನಮ್ಮ ಪಕ್ಷದ ನಾಯಕರ ನಡುವಿನ ಬಲಿಷ್ಠ ಒಗ್ಗಟ್ಟನ್ನು ಸಹಿಸಲಾಗದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹತಾಶೆಯಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಚಲುವರಾಯಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹಾಗೂ ಹಿರಿಯ ನಾಯಕರಾದ ಸಿದ್ದರಾಮಯ್ಯನವರ ವಿರುದ್ಧ ಇಲ್ಲಸಲ್ಲದ ಸ್ಟಿಂಗ್ ಆಪರೇಷನ್ ಕಥೆಗಳನ್ನು ಕಟ್ಟಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧವೇ ಮುಖ್ಯಮಂತ್ರಿಗಳು ಷಡ್ಯಂತ್ರ ರೂಪಿಸುತ್ತಾರೆ ಎಂಬ ಇಂತಹ ಅಸಂಬದ್ಧ ಹೇಳಿಕೆಗಳು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ನಾಡಿನ ಹಿತಾಸಕ್ತಿ ಕಾಯುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿರುವ ಕುಮಾರಸ್ವಾಮಿ, ದಿನಬೆಳಗಾದರೆ ಅಪಪ್ರಚಾರ ಮಾಡುವುದನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣನಿಂದ ಅನ್ಯಾಯಕ್ಕೊಳಗಾದ ನೂರಾರು ಹೆಣ್ಣುಮಕ್ಕಳ ನ್ಯಾಯದ ಪರವಾಗಿ ನಿಲ್ಲದ ಇವರು, ಪ್ರಜ್ವಲ್ ರೇವಣ್ಣನನ್ನು ಸಮರ್ಥಿಸಿಕೊಳ್ಳಲು ಹೊರಟು ನೈತಿಕತೆಯನ್ನು ಗಾಳಿಗೆ ತೂರಿದ್ದಾರೆ.
ಸಿದ್ದರಾಮಯ್ಯನವರ ದಶಕಗಳ ಸ್ವಚ್ಛ ರಾಜಕೀಯ ವರ್ಚಸ್ಸಿಗೆ ಕಳಂಕ ತರುವ ಇವರ ಪ್ರಯತ್ನಗಳು ಎಂದಿಗೂ ಫಲಿಸುವುದಿಲ್ಲ. ತಮ್ಮ ಆರೋಪಗಳಲ್ಲಿ ಕಿಂಚಿತ್ತಾದರೂ ಸತ್ಯಾಂಶವಿದ್ದರೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ತನಿಖಾ ಸಂಸ್ಥೆಯ ಮೂಲಕ ತನಿಖೆ ಮಾಡಿಸಲಿ ಎಂದು ನೇರ ಸವಾಲೆಸೆಯುತ್ತೇನೆ. ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸುವ ಜೆಡಿಎಸ್-ಬಿಜೆಪಿಯ ಇಂತಹ ಕುತಂತ್ರಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author