ಕೈ ಪಾಳಯಕ್ಕೆ ಮತ್ತೊಂದು ಶಾಕ್ – ರಾಜೀನಾಮೆ ಕೊಟ್ಟ ಕಾಂಗ್ರೆಸ್ ಅಧ್ಯಕ್ಷೆ!

ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ರಾಜ್ಯ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವರು ಇಲ್ಲದಿರುವ ಬಗ್ಗೆ ಅವರು ತೀವ್ರ ಅಸಮಾಧಾನ ಹೊರಹಾಕಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವರ್ಷ ಅಂದರೆ 2026ರ ಆಗಸ್ಟ್ 20ರಂದೇ ಸೌಮ್ಯಾ ರೆಡ್ಡಿ ಅವರು ರಾಜೀನಾಮೆ ಪತ್ರ ಬರೆದಿದ್ದು, ತಾವು ವಹಿಸಿಕೊಂಡಿದ್ದ ಜವಾಬ್ದಾರಿಯ ಅವಧಿ ಪೂರ್ಣಗೊಂಡಿರುವುದಾಗಿ ತಿಳಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸೌಮ್ಯಾ ರೆಡ್ಡಿ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಇಲ್ಲಿಯವರೆಗೆ ಒಬ್ಬರೂ ಮಹಿಳಾ ಸಚಿವರು ಇಲ್ಲದಿರುವ ಗಂಭೀರ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರಲು ಬಯಸುವುದಾಗಿ ತಿಳಿಸಿದ್ದಾರೆ.

ತಳಮಟ್ಟದಲ್ಲಿ ಸರ್ಕಾರದ 5 ಗ್ಯಾರಂಟಿಗಳು ಮಹಿಳಾ ಕ್ರಾಂತಿಯನ್ನು ಸೃಷ್ಟಿಸಿರುವುದನ್ನು ತಾವು ಕಂಡಿದ್ದಾಗಿ ಹೇಳಿರುವ ಅವರು, ರಾಜ್ಯದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಮುಂದುವರಿಯುವುದಾಗಿ ತಿಳಿಸಿರುವ ಅವರು, 2028ರ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಶ್ರಮಿಸುವುದಾಗಿ ಸ್ಪಷ್ಟಪಡಿಸಿದರು.

ಹೊಸ ಅಧ್ಯಕ್ಷರ ನೇಮಕವಾಗುವವರೆಗೂ ತಾವೇ ಅಧಿಕಾರದಲ್ಲಿ ಮುಂದುವರಿಯುವುದಾಗಿ ಸೌಮ್ಯಾ ರೆಡ್ಡಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯಾದ್ಯಂತ ಮಹಿಳಾ ಸಂಘಟನೆಯನ್ನು ಬಲಪಡಿಸಲು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕಾಗಿ ಹೈಕಮಾಂಡ್ ಹಾಗೂ ಪಕ್ಷದ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಒಳಗೆ ಮಹಿಳಾ ನಾಯಕಿಯೊಬ್ಬರು ಸಚಿವ ಸ್ಥಾನದ ಕೊರತೆಯ ಬಗ್ಗೆ ನೇರವಾಗಿ ಧ್ವನಿ ಎತ್ತಿ ರಾಜೀನಾಮೆ ನೀಡಿರುವುದು ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

About The Author