ಸ್ಟಿಂಗ್ ಯಾಕಿಷ್ಟು ಸದ್ದು ಮಾಡ್ತಿದೆ? ಜೋಶಿ ಕೊಟ್ಟ ಸ್ಪಷ್ಟನೆಯೇ ಬೇರೆ!

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕೆಪಿಎಸ್‌ಸಿ ಹಗರಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ‘ಸ್ಟಿಂಗ್ ಆಪರೇಷನ್’ ವಿವಾದದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ 2014ರ ನಂತರ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಎಸ್‌ಪಿ ಅಂದರೆ ಬೆಂಬಲ ಬೆಲೆಗೆ ಭತ್ತ ಮತ್ತು ಗೋಧಿ ಖರೀದಿ ಗಣನೀಯವಾಗಿ ವೃದ್ಧಿಸಿದೆ ಎಂದು ತಿಳಿಸಿರುವ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಹಾಗೂ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಬೇಕಂತಲೇ ಸ್ಟಿಂಗ್ ಆಪರೇಷನ್ ಸುದ್ದಿಯನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕೆಪಿಎಸ್‌ಸಿ ಹಗರಣದ ಕುರಿತು ಎಸ್‌ಐಟಿ ರಚಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಅಥವಾ ಸಿಬಿಐ ತನಿಖೆ ನಡೆಸುವಂತೆ ಸಿಎಂಗೆ ಸವಾಲು ಹಾಕಿದ್ದಾರೆ. ಒಂದು ವೇಳೆ ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆದರೆ ಸರ್ಕಾರದ ಅನೇಕ ಸಚಿವರು ಸಿಕ್ಕಿಹಾಕಿಕೊಳ್ಳುತ್ತಾರೆ ಮತ್ತು ರಾಜ್ಯ ಸರ್ಕಾರವೇ ಪತನವಾಗಬಹುದು ಎಂಬ ಆತಂಕದಿಂದಲೇ ಇವರು ಸಮಗ್ರ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯಾರೇ ವಿಡಿಯೋ ಮಾಡಿರಲಿ, ಅದು ಅಸಲಿ, ನಕಲಿ ಅಥವಾ ಎಐ ಸೃಷ್ಟಿಯೇ ಎಂಬುದು ಎಸ್‌ಐಟಿ ತನಿಖೆಯಿಂದ ಹೊರಬರಲಿ, ಆದರೆ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿರುವುದು ಬೇಸರದ ಸಂಗತಿ ಎಂದರು. ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಎಸ್‌ಎಪಿ ಸರಿಯಾಗಿ ಸಿಗುತ್ತಿಲ್ಲ ಹಾಗೂ ರೈತರಿಗೆ ಸಮರ್ಪಕ ಬರ ಪರಿಹಾರ ನೀಡುತ್ತಿಲ್ಲ ಎಂದು ಕಿಡಿಕಾರಿದ ಜೋಶಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು.

ಕಬ್ಬು ಬೆಳೆಗಾರರ ಬೇಡಿಕೆಗಳ ಅಧ್ಯಯನಕ್ಕಾಗಿ ಈಗಾಗಲೇ ಪ್ರೊ. ರಮೇಶ್‌ಚಂದ್ ಸಾರಥ್ಯದಲ್ಲಿ ಜಂಟಿ ಸಮಿತಿಯನ್ನು ರಚಿಸಲಾಗಿದ್ದು, ನಾಲ್ಕೈದು ದಿನದಲ್ಲೇ ಕಾರ್ಯಾರಂಭ ಮಾಡಲಿದೆ ಎಂದರು. ರೈತ ಹೋರಾಟದ ವೇಳೆ ಕೆಲವರು ಸಿಟ್ಟಿನಲ್ಲಿ ಏನೇನೋ ಮಾತನಾಡಿದ್ದರೂ ಸಾರ್ವಜನಿಕ ಜೀವನದಲ್ಲಿ ಅದು ಸಹಜ ಎಂದು ತಿಳಿಸಿರುವ ಅವರು, ರೈತರು ಹೋರಾಟದಿಂದ ಹಿಂದೆ ಸರಿದು ಮಾತುಕತೆಗೆ ಬಂದರೆ ಚರ್ಚಿಸಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಪುನರುಚ್ಚರಿಸಿದ್ದಾರೆ.

About The Author