ಆಧಾರ್ ಹೆಸರು, ವಿಳಾಸ ಬದಲಾವಣೆ – ಯಾವ ದಾಖಲೆ ಸಲ್ಲಿಸಬೇಕು ಗೊತ್ತಾ?

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಅಥವಾ ಜನ್ಮ ದಿನಾಂಕವನ್ನು ಬದಲಾಯಿಸಬೇಕೆ? ಹಾಗಾದರೆ ಯುಐಡಿಎಐ ನಿಗದಿಪಡಿಸಿರುವ ಮಾನ್ಯ ದಾಖಲೆಗಳ ಬಗ್ಗೆ ನೀವು ಕಡ್ಡಾಯವಾಗಿ ತಿಳಿದಿರಲೇಬೇಕು. ಆಧಾರ್‌ನಲ್ಲಿ ಯಾವುದೇ ವೈಯಕ್ತಿಕ ವಿವರಗಳನ್ನು ಪರಿಷ್ಕರಿಸಲು ಪ್ರಾಧಿಕಾರವು ಕೆಲವು ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯಗೊಳಿಸಿದೆ.

ಮೊದಲಿಗೆ, ಗುರುತಿನ ಪುರಾವೆಗಾಗಿ ಹೆಸರು ಮತ್ತು ಭಾವಚಿತ್ರವಿರುವ ಭಾರತೀಯ ಪಾಸ್‌ಪೋರ್ಟ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಸರ್ಕಾರಿ ಐಡಿ ಕಾರ್ಡ್ ಅಥವಾ ಪಿಂಚಣಿ ಪಾವತಿ ಆದೇಶವನ್ನು ಬಳಸಬಹುದು. ಇದರೊಂದಿಗೆ ಕಿಸಾನ್ ಫೋಟೋ ಪಾಸ್‌ಬುಕ್, ಎಸ್‌ಸಿ/ಎಸ್‌ಟಿ/ಒಬಿಸಿ ಪ್ರಮಾಣಪತ್ರ, ವಿವಾಹ ನೋಂದಣಿ ಪ್ರಮಾಣಪತ್ರ ಹಾಗೂ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯ ಅಂಕಪಟ್ಟಿಗಳೂ ಕೂಡ ಮಾನ್ಯವಾಗಿವೆ.

ಇನ್ನು ವಿಳಾಸದ ಪುರಾವೆಗಾಗಿ ಪಾಸ್‌ಪೋರ್ಟ್, ಪಡಿತರ ಚೀಟಿ, ವೋಟರ್ ಐಡಿ ಜೊತೆಗೆ, ಮೂರು ತಿಂಗಳೊಳಗಿನ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್, ವಿದ್ಯುತ್, ನೀರು, ಗ್ಯಾಸ್ ಅಥವಾ ಲ್ಯಾಂಡ್‌ಲೈನ್ ಬಿಲ್‌ಗಳನ್ನು ಸಲ್ಲಿಸಬಹುದು. ಜೊತೆಗೆ ನೋಂದಾಯಿತ ಭೋಗ್ಯ ಅಥವಾ ಬಾಡಿಗೆ ಒಪ್ಪಂದದ ಪತ್ರ ಹಾಗೂ ತೆರಿಗೆ ಸ್ವೀಕೃತಿ ಪತ್ರಗಳನ್ನೂ ವಿಳಾಸ ಬದಲಾವಣೆಗೆ ಬಳಸಿಕೊಳ್ಳಬಹುದಾಗಿದೆ.

ಕುಟುಂಬದ ಮುಖ್ಯಸ್ಥರ ಮೂಲದಿಂದ ವಿಳಾಸ ಅಥವಾ ವಿವರ ಪರಿಷ್ಕರಿಸುವಾಗ ಸಂಬಂಧದ ಪುರಾವೆಗಾಗಿ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಪಡಿತರ ಚೀಟಿ ಅಥವಾ ಸ್ವಯಂ ಘೋಷಣಾ ಪತ್ರವನ್ನು ಯುಐಡಿಎಐ ಮಾನ್ಯ ಮಾಡುತ್ತದೆ. ಹಾಗೆಯೇ, ಜನ್ಮ ದಿನಾಂಕದ ತಿದ್ದುಪಡಿಗಾಗಿ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಸರ್ಕಾರಿ ಗುರುತಿನ ಚೀಟಿ ಅಥವಾ ಮಾನ್ಯತೆ ಪಡೆದ ಮಂಡಳಿ ಹಾಗೂ ವಿಶ್ವವಿದ್ಯಾಲಯಗಳು ನೀಡಿದ ಅಂಕಪಟ್ಟಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

About The Author