Hubli News: ಮಾಂಜಾ ದಾರಕ್ಕೆ ಮತ್ತೊಂದು ಬಲಿ..! ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸಾ*ವು..!

Hubli News: ಹುಬ್ಬಳ್ಳಿಯಲ್ಲಿ ಅಪಾಯಕಾರಿ ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿಯಾಗಿದೆ..! ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಇದೀಗ ಮತ್ತೊಂದು ಜೀವವನ್ನು ಬಲಿ ಪಡೆದಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿಸಿದೆ.

ಹೆಸರು ವಿದ್ಯಾ ಮಂಜುನಾಥ ಗೌಡರ, ವಯಸ್ಸು 38. ಹುಬ್ಬಳ್ಳಿಯ ಭರತ್ ನಗರದ ನಿವಾಸಿ. ವೃತ್ತಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ವಿದ್ಯಾ, ಎಂದಿನಂತೆ ಮನೆಯಿಂದ ಲ್ಯಾಬ್‌ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿ ಬಳಿ ಈ ದುರ್ಘಟನೆ ಸಂಭವಿಸಿದೆ. ಸ್ಕೂಟಿಯಲ್ಲಿ ಹೋಗುತ್ತಿದ್ದ ವಿದ್ಯಾ ಅವರ ಕುತ್ತಿಗೆಗೆ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಸಿಲುಕಿದೆ. ಇದರಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ.

ಗಾಳಿಪಟದ ಸಂಭ್ರಮಕ್ಕೆ ಬಳಸುವ ಮಾಂಜಾ ದಾರ, ರಸ್ತೆ ಮೇಲೆ ಸಂಚರಿಸುವವರ ಪಾಲಿಗೆ ಮಾರಕವಾಗುತ್ತಿದೆ. ಇತ್ತೀಚೆಗಷ್ಟೇ ಮಾಂಜಾ ದಾರದಿಂದ ಮಹಿಳೆಯೊಬ್ಬರಿಗೆ ಅಪಘಾತ ಸಂಭವಿಸಿದ ಘಟನೆ ನಡೆದಿತ್ತು. ಇದೀಗ ಮತ್ತೊಬ್ಬ ಮಹಿಳೆ ಪ್ರಾಣ ಕಳೆದುಕೊಂಡಿರುವುದು ಮಾಂಜಾ ದಾರದ ಅಪಾಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಘಟನೆಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಾಳಿಪಟ ಹಾರಿಸುವ ಸಂಭ್ರಮ ಮತ್ತೊಬ್ಬರ ಬದುಕಿಗೆ ಕತ್ತಲೆಯಾಗಬಾರದು. ಪ್ರಾಣಕ್ಕೆ ಕುತ್ತು ತರುವ ಮಾಂಜಾ ದಾರದ ಬಳಕೆ ಮತ್ತು ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಇದೀಗ ಮತ್ತೆ ಕೇಳಿಬಂದಿದೆ.

About The Author