Political News: ಸದಾ ಕಾಂಗ್ರೆಸ್ ವಿರುದ್ಧ ಕಿಡಿಕಾರುವ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಂದರ್ಶನದ ತುಣುಕು ಅಪ್ಲೋಡ್ ಮಾಡಿರುವ ಪ್ರಿಯಾಂಕ್, ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ಬಿಟ್ಟರೆ ಈ ಜಗತ್ತಿನಲ್ಲಿ ಮತ್ತೊಂದು ದೇಶದ ಪರಿಚಯ ಬಿಜೆಪಿಗರಿಗೆ ಇದ್ದಂತಿಲ್ಲ.. ಮಾನ್ಯ ಅಶೋಕ್ ಅವರೇ, ನಿಮ್ಮ RSS ಅಮೇರಿಕಾದಿಂದ ದೇಣಿಗೆ ಪಡೆದುಕೊಂಡಿರುವುದನ್ನು ನಿಮಗೆ ತಿಳಿಸಿಲ್ಲ ಎಂದೆನಿಸುತ್ತದೆ! ಹಾಗೆಯೇ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವ ಮೋಹನ್ ಭಾಗವತ್ ಹೇಳಿಕೆಯ ಹಿಂದಿನ ಅರ್ಥ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶವೇ? ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವುದು ನಿಮ್ಮ ಸಂಘದವರೇ ಹೊರತು ಕಾಂಗ್ರೆಸ್ ಅಲ್ಲ ಎಂದು ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.
ಅಶೋಕ್ ಅವರು ಸಂಘದವರ ಹೇಳಿಕೆಗಳನ್ನಾದರೂ ಗಮನಿಸುವ ಪ್ರಯತ್ನ ಮಾಡಿದ್ದಿದ್ದರೆ, ಇಷ್ಟು ದಡ್ಡತನ ಪ್ರದರ್ಶಿಸುವ ಪ್ರಮೇಯ ಬರುತ್ತಿರಲಿಲ್ಲ. ವಿರೋಧ ಪಕ್ಷದ ನಾಯಕರಿಗೆ ಶಾಖೆಗೆ ಹೋಗಿ ಅವರು ಕೊಟ್ಟ ಕೋಲು ಅಲ್ಲಾಡಿಸಿ ಬರುವುದು ಬಿಟ್ಟರೆ ತಮ್ಮ ಯಜಮಾನರ ಬಗ್ಗೆ ಕನಿಷ್ಠ ತಿಳುವಳಿಕೆ ಪಡೆದುಕೊಂಡಿಲ್ಲ, RSS ನವರು ತಿಳುವಳಿಕೆಯನ್ನು ಕೊಟ್ಟೂ ಇಲ್ಲ. ಅಶೋಕ್ ಅವರಿಗೆ ದೇಶದ ಇತಿಹಾಸವೂ ಗೊತ್ತಿಲ್ಲ, RSS ಇತಿಹಾಸವೂ ಗೊತ್ತಿಲ್ಲ..
ಕಾನೂನು, ಸಂವಿಧಾನಗಳ ಬಗ್ಗೆ ಈಗಲಾದರೂ RSSಗೆ ಅರಿವು ಮೂಡಿದೆ ಅಲ್ಲವೇ, ಅಶೋಕಣ್ಣ? ಅಂದಹಾಗೆ, ನಿಮ್ಮ ಗಮನಕ್ಕೆ ಇರಲಿ.. ದೇಶದ ಅತ್ಯಂತ ಸಿರಿವಂತ ರಾಜಕೀಯ ಪಕ್ಷ ನಿಮ್ಮದೇ, ಚುನಾವಣಾ ಬಾಂಡ್ ಅಕ್ರಮಗಳ ಬಗೆಗಿನ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳು ಇನ್ನೂ ಬಾಕಿ ಇವೆ.. ಉತ್ತರಿಸುವ ಶೌರ್ಯ ನಿಮ್ಮಲಿದೆಯೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
BJP ಪಕ್ಷದಲ್ಲಿ ನಾಯಕರೆನಿಸಿಕೊಳ್ಳಬೇಕು ಎಂದರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಬೇಕು, ಪಾಕಿಸ್ತಾನದ ಜಪ ಮಾಡಬೇಕು ಎಂದಿದ್ದ ಅಶೋಕ್ ಅವರು ಈಗ ತಾವೂ ಒಬ್ಬ ನಾಯಕ ಎನಿಸಿಕೊಳ್ಳಲು ಹೊರಟಿದ್ದಾರೆಯೇ? ಅಥವಾ “ವಿಪಕ್ಷ ನಾಯಕ”ನ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆಯೇ? ಎಂದು ಆರ್.ಅಶೋಕ್ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.




