Political News: ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಭಾಷಣ ಮಾಡುವ ಭರದಲ್ಲಿ, ಮೋದಿ ವಿರುದ್ಧ ವಾಗ್ದಾಳಿ ನಡೆಸುವ ತರಾತುರಿಯಲ್ಲಿ, ಮೋದಿ ಕಾ ಬಾಪ್ ಭೀ ಜಾಯೇಗಾ ಎಂದು ಹೇಳಿದ್ದರು.
ಈ ಬಗ್ಗೆ ಬಿಜೆಪಿ ಜೆಡಿಎಸ್ ಸೇರಿ ಮೋದಿ ಬೆಂಬಲಿತ ಪಕ್ಷದ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ. ಅದುವೇ ಇಂತಹ ನುಡಿಮುತ್ತುಗಳನ್ನು ನುಡಿಸಿರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ.
ಮಾನ್ಯ ಪ್ರಧಾನಿಗಳ ಪೂಜ್ಯ ತಂದೆಯವರನ್ನು ರಾಜಕೀಯ ಟಾರ್ಗೆಟ್ ಮಾಡಿಕೊಂಡು ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ. ಖರ್ಗೆ ಅವರು ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.




