Political News: ಕನ್ನಡ ಕೇವಲ ಭಾಷೆ ಮಾತ್ರವಲ್ಲ, ನಮ್ಮ ಅಸ್ಮಿತೆ; ಸಚಿವ ಶಿವರಾಜ್ ತಂಗಡಗಿ

Political News: ಕನ್ನಡ ರಾಜ್ಯೋತ್ಸವವೆಂದರೆ ಕೇವಲ ಒಂದು ರಾಜ್ಯ ಉದಯಿಸಿದ ದಿನವಲ್ಲ. ಇದು ನಮ್ಮ ಅಸ್ಮಿತೆಯ ಸಂಭ್ರಮ. ನಮ್ಮ ತಾಯಿ ಭುವನೇಶ್ವರಿಯನ್ನು ಆರಾಧಿಸುವ ಪವಿತ್ರ ದಿನ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತಿ, ಧರ್ಮ, ಪ್ರದೇಶದ ಎಲ್ಲ ಭೇದಗಳನ್ನು ಮರೆತು ಕನ್ನಡದ ಹೆಸರಿನಲ್ಲಿ ನಾವೆಲ್ಲರೂ ಒಂದಾಗುವ ಭಾವನಾತ್ಮಕ ದಿನ ಎಂದರು.

ಒಂದು ಕ್ಷಣ ಎಲ್ಲರೂ ಯೋಚಿಸಿ. ತಾಯಿಯ ಮಡಿಲಲ್ಲಿ ನಾವು ಕೇಳಿದ ಮೊದಲ ಮಾತು ಕನ್ನಡ. ಬಾಲ್ಯದಲ್ಲಿ ತೊದಲಿದ ಮೊದಲ ಪದ ಕನ್ನಡ. ನಮ್ಮ ಸುಖದಲ್ಲಿ ಸಂಭ್ರಮಿಸುವ, ದುಃಖದಲ್ಲಿ ಸಾಂತ್ವನ ನೀಡುವ ಭಾಷೆ ಕನ್ನಡ. ನಮ್ಮ ಬದುಕಿನ ಪ್ರತಿಯೊಂದು ಭಾವನೆಯ ಹಿಂದೆಯೂ ಕನ್ನಡವಿದೆ. ಹಾಗಾಗಿ ಕನ್ನಡವೆಂಬುದು ಕೇವಲ ಮಾತನಾಡುವ ಭಾಷೆಯಲ್ಲ. ಅದು ತಾಯಿಯ ಪ್ರೀತಿ, ನಮ್ಮ ಮಣ್ಣಿನ ಸೊಗಡು, ನಮ್ಮ ಸಂಸ್ಕಾರದ ಪ್ರತಿಬಿಂಬ ಮತ್ತು ಬದುಕಿನ ಉಸಿರು ಎಂದು ಭಾವನಾತ್ಮಕವಾಗಿ ನುಡಿದರು.‌

ಏಕೀಕರಣದ ಹಿಂದೆ ಮಹನೀಯರ ಪಾತ್ರ; 1956ರ ನವೆಂಬರ್ 1ರಂದು ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಮೈಸೂರು ರಾಜ್ಯದ ಉದಯವಾಯಿತು. ಈ ಏಕೀಕರಣದ ಹಿಂದೆ ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರ ದಶಕಗಳ ಹೋರಾಟ, ತ್ಯಾಗ ಮತ್ತು ಪರಿಶ್ರಮವಿದೆ. ಅವರು ಕಂಡ ಕನಸು ಕೇವಲ ಭೂಪ್ರದೇಶಗಳನ್ನು ಒಂದುಗೂಡಿಸುವುದಾಗಿರಲಿಲ್ಲ. ಕನ್ನಡಿಗರ ಭಾಷೆ, ಸಂಸ್ಕೃತಿ, ಬದುಕು ಮತ್ತು ಸ್ವಾಭಿಮಾನವನ್ನು ಒಂದಾಗಿಸುವುದಾಗಿತ್ತು. ಅಂತಹ ಮಹನೀಯರ ಹೋರಾಟದ ಫಲವಾಗಿ ಇಂದು ನಾವು ಏಕೀಕೃತ ಕರ್ನಾಟಕದಲ್ಲಿ ಬದುಕುತ್ತಿದ್ದೇವೆ. ಅವರ ತ್ಯಾಗಕ್ಕೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಕನ್ನಡವನ್ನು ನಮ್ಮ ಬದುಕಿನಲ್ಲಿ ಉಳಿಸಿ ಬೆಳೆಸುವುದು ಎಂದು ತಿಳಿಸಿದರು.‌

ನಮ್ಮ ಮಕ್ಕಳ ಮೊದಲ ಮಾತು ಕನ್ನಡವಾಗಬೇಕು; ಇತಿಹಾಸ ನೆನದು ಸಂಭ್ರಮಿಸುವುದಷ್ಟೇ ಕನ್ನಡಾಭಿಮಾನವಲ್ಲ. ಕನ್ನಡದ ಭವಿಷ್ಯವನ್ನು ರೂಪಿಸುವುದೇ ನಿಜವಾದ ಕನ್ನಡ ಪ್ರೀತಿ. ನಮ್ಮ ಮಕ್ಕಳ ಮೊದಲ ಮಾತು ಕನ್ನಡವಾಗಬೇಕು. ಯುವಜನರ ಉದ್ಯೋಗದಲ್ಲಿ ಕನ್ನಡಕ್ಕೆ ಅವಕಾಶ ಸಿಗಬೇಕು. ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ಇರಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ಡಿಜಿಟಲ್ ಜಗತ್ತಿನಲ್ಲೂ ಕನ್ನಡ ವಿಜೃಂಭಿಸಬೇಕು.

ಕನ್ನಡ ಭಾಷೆ ನಿರ್ಲಕ್ಷ್ಯಿಸಿದ್ರೆ ಸಹಿಸಲ್ಲ:
ಕನ್ನಡ ಕೇವಲ ಮಾತನಾಡುವ ಭಾಷೆಯಾಗಬಾರದು.‌ ಅದು ಅನ್ನದ ಭಾಷೆಯೂ ಆಗಬೇಕು. ಹೀಗಾಗಿ ಕನ್ನಡ ಮಾತೃ ಭಾಷೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇತ್ತೀಚೆಗೆ ಮಹಿಳೆಯೊಬ್ಬರು ಕನ್ನಡ ಭಾಷೆಯಲ್ಲಿ ತಮ್ಮ ವ್ಯಕ್ತಿ ಪರಿಚಯ ಕೊಟ್ಟ ಕಾರಣಕ್ಕೆ ಉದ್ಯೋಗ ನೀಡಲು ನಿರಾಕರಿಸಿದರು ಎಂದು ಹೇಳಿಕೆ ಕೊಟ್ಟಿದ್ದರು. ನಮ್ಮ ಸರ್ಕಾರ ಇಂತಹದ್ದನ್ನೆಲ್ಲ ಸಹಿಸಲು. ಮುಂದೆ ಇಂತಹದು ಮರುಕಳಿಸಿದರೆ ಕನ್ನಡವನ್ನು ನಿರ್ಲಕ್ಷ್ಯ ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ವೇದಿಕೆಯಲ್ಲೇ ಎಚ್ಚರಿಕೆ ನೀಡಿದರು.‌

ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ನಾಡಿನ ಮೂಲೆ ಮೂಲೆಗಳಲ್ಲಿರುವ ಕಲಾವಿದರು, ಸಾಹಿತಿಗಳು ಮತ್ತು ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ.

ರಾಜ್ಯೋತ್ಸವದ ದಿನ ಕನ್ನಡದ ಬಾವುಟ ಹಾರಿಸಿ, ಘೋಷಣೆ ಕೂಗುವುದಷ್ಟೇ ನಮ್ಮ ಕನ್ನಡಾಭಿಮಾನ ಆಗಬಾರದು. ವರ್ಷದ 365 ದಿನಗಳೂ ಕನ್ನಡವನ್ನು ಪ್ರೀತಿಸಬೇಕು, ಬಳಸಬೇಕು ಮತ್ತು ಬೆಳೆಸಬೇಕು.
ಜಾತಿ, ಧರ್ಮ, ಪ್ರದೇಶದ ಭೇದಗಳನ್ನು ಮರೆತು ಕನ್ನಡದ ಬಂಧದಲ್ಲಿ ಒಂದಾಗೋಣ ಎಂದು ಸಚಿವರು ಕರೆಕೊಟ್ಟರು.

ನಾಮಫಲಕಗಳಲ್ಲಿ ಕನ್ನಡ ಬಸಳಸದಿದ್ರೆ ಕ್ರಮ:
ನಮ್ಮ ಸರ್ಕಾರ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ’ ಮೂಲಕ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿದೆ. ಆದರೆ ಇಂದಿಗೂ ಹಲವು ನಗರ ಪ್ರದೇಶಗಳಲ್ಲಿ, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಬಳಕೆಯನ್ನು ನಿರ್ಲಕ್ಷಿಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

About The Author