Political News: “ಕೆಎಂಎಫ್ ವತಿಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ ನೀಡಿದ್ದೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ಸ್ ಬಳಿ ಮಾಧ್ಯಮದವರಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. ವಿವಿಧ ಬಣ್ಣಗಳ ಹಾಲಿನ ದರದಲ್ಲಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, “ಕೊಬ್ಬಿನಾಂಶ ಹೆಚ್ಚು ಇರುವ ಹಾಲಿನ ದರ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳು ಸಂಪೂರ್ಣವಾಗಿ ವಿವರಿಸಲಿದ್ದಾರೆ” ಎಂದು ಹೇಳಿದರು.
“ನೀರಿನ ಬಾಟಲಿ ಬೆಲೆ ಹೆಚ್ಚಾದರೆ ಒಬ್ಬರೂ ಮಾತನಾಡುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರಕ್ಕೆ ಜಿಎಸ್ ಟಿ ಹೋಗುತ್ತದೆ. ಹಾಲಿನ ದರ ಹೆಚ್ಚಳ ಮಾಡಿದ್ದರಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ” ಎಂದರು.
ಬಸ್ ದರ ಏರಿಕೆ; ಸಾರಿಗೆ ಇಲಾಖೆ ನಿರ್ಧರಿಸಲಿದೆ
“ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಪ್ರತಿದಿನ ಡೀಸೆಲ್ ಮೊತ್ತ ಭರಿಸಲು ಕಷ್ಟವಾಗಿದ್ದು, ವಿಶೇಷ ಅನುದಾನ ನೀಡಿ ಸಾರಿಗೆ ವ್ಯವಸ್ಥೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಬಸ್ ಸಂಚಾರ ಕಡಿಮೆ ಇರುವ ಕಡೆಗಳಲ್ಲಿ ಹೊಸ ಲೆಕ್ಕಾಚಾರದ ಮೂಲಕ ಬಸ್ ಓಡಿಸಲು ತೀರ್ಮಾನ ಮಾಡಲಾಗಿದೆ. ದರ ಏರಿಕೆ ಬಗ್ಗೆ ಸಾರಿಗೆ ಇಲಾಖೆಯೇ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ” ಎಂದರು.
ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿ
ಗುತ್ತಿಗೆದಾರರ ಪದಾಧಿಕಾರಿಗಳು ಮೂರು ಬೇಡಿಕೆಗಳನ್ನು ಇಟ್ಟಿರುವ ಬಗ್ಗೆ ಕೇಳಿದಾಗ,
“ಈ ಬಗ್ಗೆ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದು 38 ಸಾವಿರ ಕೋಟಿ ರೂ ಬಾಕಿ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ ಕೊನೆ 6 ತಿಂಗಳ ಕೆಲಸಗಳು ಬಾಕಿ ಉಳಿದಿದೆ. ಈಗ ನಾವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಬಿಲ್ಲುಗಳು ಸರಿಮಾಡಲಾಗುತ್ತಿದೆ.
ಕಾವೇರಿ ನೀರಾವರಿ ಯೋಜನೆಯ ಕೆಲಸಗಳ ಬಾಕಿ ಬಿಲ್ಲುಗಳು ಬಹಳಷ್ಟಿವೆ. ಗುತ್ತಿಗೆದಾರರ ಸಂಘದ ಕೆಲವು ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ” ಎಂದರು.
ಉಪಚುನಾವಣೆ ಸಿದ್ಧತೆ; ಮಂಗಳವಾರ ಹಿರಿಯೂರಿಗೆ ಪ್ರಯಾಣ
ಉಪಚುನಾವಣೆಯ ಸಿದ್ಧತೆಗಳ ಬಗ್ಗೆ ಕೇಳಿದಾಗ, “ಉಪಚುನಾವಣೆಗೆ ಸಿದ್ಧತೆ ಕೈಗೊಳ್ಳುವುದು ನನ್ನ ಕರ್ತವ್ಯ. ಹಿರಿಯೂರಿನಲ್ಲಿ ಸಾಕಷ್ಟು ಕಾಮಗಾರಿಗಳನ್ನು ಕೈಗೊಂಡಿದ್ದು, ಮಂಗಳವಾರ ಅಲ್ಲಿಗೆ ತೆರಳಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು” ಎಂದರು.




