Sandalwood: ರೇಣುಕಾಸ್ವಾಮಿ ಹತ್ಯೆ ಪ್ರಕರಕಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೋಶ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಪ್ರದೋಶ್ 14ನೇ ಆರೋಪಿಯಾಗಿದ್ದು, ಮಾಫಿ ಸಾಕ್ಷಿಯಾಗಿದ್ದರು. ಕಳೆದ ವರ್ಷ ಪ್ರದೋಷ್ ತಂದೆ ತೀರಿಹೋಗಿದ್ದು, ಇದೀಗ ಅವರ ಪ್ರಥಮ ಪುಣ್ಯಾರಾಧನೆಯಲ್ಲಿ ಭಾಗವಹಿಸಲು ನವೆಂಬರ್ 7ರಿಂದ ನವೆಂಬರ್ 12ರವರೆಗೆ ಪ್ರದೋಷ್‌ಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ಈ ಹಿಂದೆ ಸೆಷನ್ಸ್ ನ್ಯಾಯಾಲಯಕ್ಕೆ ಪ್ರದೋಷ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಸೆಷನ್ಸ್ ಕೋರ್ಟ್ ಅರ್ಜಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ, ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರದೋಷ್‌ಗೆ ಸದ್ಯ ಜಾಮೀನು ಮಂಜೂರಾಗಿದೆ. ನ್ಯಾಯಮೂರ್ತಿ ಅನಂತ್ ರಾಮ್‌ನಾಥ್ ಹೆಗ್ಡೆ ಇದ್ದ ಪೀಠ ಈ ಮಹತ್ವದ ಆದೇಶ ನೀಡಿದೆ.
ನ್ಯಾಯಪೀಠದ ನಿರ್ದೇಶನದಂತೆ ಪ್ರದೋಷ್‌ನನ್ನು ನವೆಂಬರ್ 8ರಿಂದ 12ರವರೆಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮನೆಗೆ ಕಳುಹಿಸಿ, ಸಂಜೆ 6 ಗಂಟೆಗೆ ವಾಪಸ್ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಬೇಕು. ಈ ಅವಧಿಯಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಪೋಲೀಸರು ಸೂಕ್ತ ಬೆಂಗಾವಲು ನೀಡಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾರನ್ನೂ ಭೇಟಿಯಾಗದಂತೆ, ಮತ್ತು ಸಂಪರ್ಕಿಸದಂತೆ ಕಟ್ಟು ನಿಟ್ಟಿನ ಷರತ್ತು ವಿಧಿಸಲಾಗಿದೆ.
ಜತೆಗೆ ಪುಣ್ಯಾರಾಧನೆಯಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ. ಯಾವ ಪುರೋಹಿತರು ಪುಣ್ಯಾರಾಧನೆ ಮಾಡಲಿದ್ದಾರೆಂದು ಅವರ ಹೆಸರು ಸೇರಿ ಎಲ್ಲ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ, ಕಾಮಾಕ್ಷಿಪಾಳ್ಯ ಪೋಲೀಸರಿಗೆ ನೀಡಬೇಕೆಂದು ಸೂಚಿಸಲಾಗಿದೆ.




