Dharwad News: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ನಾಲ್ಕು ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ. ಜಾನುವಾರುಗಳಿಗಾಗಿ ಸಾಲ-ಸೂಲ ಮಾಡಿ ಸಂಗ್ರಹಿಸಿಟ್ಟಿದ್ದ ಮೇವು ಬೆಂಕಿಗೆ ಆಹುತಿಯಾಗಿದ್ದು, ನಾಲ್ವರು ರೈತರಿಗೆ ಅಂದಾಜು 15 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಅಷ್ಟಕ್ಕೂ ಬೆಂಕಿ ಅವಘಡ ನಡೆದಿದ್ದಾದರೂ ಹೇಗೆ? ಇಲ್ಲಿದೆ ವರದಿ.
ಇಲ್ಲಿ ಕಾಣಿಸುತ್ತಿರುವ ದೃಶ್ಯಗಳನ್ನು ಒಮ್ಮೆ ನೋಡಿ… ಕಷ್ಟಪಟ್ಟು ಬೆಳೆದ ಬೆಳೆ, ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವು ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿದೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ನಾಲ್ಕು ರೈತರ ಬದುಕಿಗೆ ದೊಡ್ಡ ಹೊಡೆತ ನೀಡಿದೆ.
ಗ್ರಾಮದ ರೈತರಿಗೆ ಸೇರಿದ ಹೊಟ್ಟಿನ ಬಣವೆಗಳಿಗೆ ಏಕಾಏಕಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ನಾಲ್ಕು ಬಣವೆಗಳನ್ನು ಆವರಿಸಿದೆ. ಬಣವೆಗಳಲ್ಲಿದ್ದ ಮೇವು ಹಾಗೂ ದವಸ ಧಾನ್ಯಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆತಂಕಗೊಂಡ ಗ್ರಾಮಸ್ಥರು ಒಗ್ಗೂಡಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ಶೀತಲ್ ನಾಗರಹಳ್ಳಿ, ಶಿವಾನಂದ, ತಂಗ್ಯಮ್ಮನವರ ಹಾಗೂ ಯಲ್ಲಪ್ಪ ಕಲಿವಾಳ ಅವರಿಗೆ ಸೇರಿದ ಬಣವೆಗಳು ಬೆಂಕಿಗಾಹುತಿಯಾಗಿದ್ದು, ಅಂದಾಜು 15 ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಮಾಡಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂದೆಡೆ ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರು, ಮತ್ತೊಂದೆಡೆ ಜಾನುವಾರುಗಳಿಗಾಗಿ ಸಾಲ-ಸೂಲ ಮಾಡಿ ಕಷ್ಟಪಟ್ಟು ಸಂಗ್ರಹಿಸಿಟ್ಟಿದ್ದ ಮೇವು ಕೂಡ ಬೆಂಕಿಗೆ ಆಹುತಿಯಾಗಿದೆ. ಇದೀಗ ಜಾನುವಾರುಗಳಿಗೆ ಮೇವು ಒದಗಿಸುವುದೇ ರೈತರಿಗೆ ದೊಡ್ಡ ಸವಾಲಾಗಿದೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಆಕಸ್ಮಿಕ ಬೆಂಕಿ ರೈತರ ಬದುಕನ್ನೇ ಕಂಗೆಡಿಸಿದೆ. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.




