Hubli News: ಟ್ರಾಫಿಕ್ ನಿಯಂತ್ರಣದಲ್ಲಿ ಹೊಸ ಕಮಿಷನರ್ ಖಡಕ್ ಕ್ರಮಕ್ಕೆ ಜನರ ಮೆಚ್ಚುಗೆ

Hubli News: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಚಾರಿ ವ್ಯವಸ್ಥೆ ಸುಧಾರಣೆಗೆ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ವಿಶೇಷ ಗಮನ ಹರಿಸಿದ್ದಾರೆ. ಹಿಂದೆ ಸಂಚಾರಿ ಪೊಲೀಸರ ವರ್ತನೆಯಿಂದ ಸಾರ್ವಜನಿಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು ಎಂಬ ಆರೋಪಗಳಿದ್ದವು. ಇದೀಗ ಬಾಡಿ ಕ್ಯಾಮೆರಾ ಬಳಕೆ ಹಾಗೂ ಡಿಜಿಟಲ್ ಫೈನ್ ವ್ಯವಸ್ಥೆಯ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ಕಮಿಷನರ್ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿ… ಸಾಂಸ್ಕೃತಿಕ ನಗರಿ ಧಾರವಾಡ… ಅವಳಿ ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಟ್ರಾಫಿಕ್ ನಿಯಂತ್ರಣ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಆದರೆ ಹೊಸ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸಂಚಾರಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತಿವೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ಹಿಂದೆ ಕೆಲವು ಸಂಚಾರಿ ಪೊಲೀಸರು ಬಾಡಿ ಕ್ಯಾಮೆರಾ ಬಳಸದೆ ವಾಹನ ಸವಾರರನ್ನು ತಡೆದು ಬೇಕಾಬಿಟ್ಟಿಯಾಗಿ ಕಿರಿಕಿರಿ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿಬರುತ್ತಿದ್ದವು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪೊಲೀಸರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಆದರೆ ಇದೀಗ ಬಾಡಿ ಕ್ಯಾಮೆರಾ ಬಳಕೆ ಹಾಗೂ ಡಿಜಿಟಲ್ ಫೈನ್ ಮಷಿನ್ ಮೂಲಕ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಕಮಿಷನರ್ ಬಂದ ಬಳಿಕ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಸುಧಾರಿಸಿದೆ. ಅನಗತ್ಯವಾಗಿ ವಾಹನ ಸವಾರರಿಗೆ ತೊಂದರೆ ನೀಡುವ ಘಟನೆಗಳು ಕಡಿಮೆಯಾಗಿವೆ. ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗುತ್ತಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ ಎಂಬ ಸಂತಸ ವ್ಯಕ್ತವಾಗುತ್ತಿದೆ.

ದಂಡ ವಿಧಿಸುವುದಷ್ಟೇ ಅಲ್ಲದೆ, ಪೊಲೀಸರ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬಾಡಿ ಕ್ಯಾಮೆರಾ ಬಳಕೆಯೂ ಮಹತ್ವ ಪಡೆದಿದೆ. ಒಟ್ಟಿನಲ್ಲಿ ಕಮಿಷನರ್ ಭೂಷಣ್ ಬೋರಸೆ ಅವರ ಸಂಚಾರಿ ನಿಯಂತ್ರಣ ಕ್ರಮಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೇ ರೀತಿಯ ಕಟ್ಟುನಿಟ್ಟಿನ ಮತ್ತು ಪಾರದರ್ಶಕ ಕಾರ್ಯವೈಖರಿ ಮುಂದುವರಿಯಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

About The Author