ರಾಜ್ಯದಲ್ಲೇ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ ಶಾಸಕ ಶ್ರೀನಿವಾಸ ಮಾನೆ!: ಮಹಿಳಾ ಉದ್ಯಮಿಗಳ ಉತ್ಪನ್ನ ಪ್ರದರ್ಶನ

Haveri News: ಹಾವೇರಿ ಜಿಲ್ಲೆಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಮಹಿಳಾ ಉದ್ಯಮಿಗಳಿಗಾಗಿ ಉತ್ಪನ್ನ ಪ್ರದರ್ಶನ ಮೇಳವನ್ನು ಇರಿಸಿದ್ದಾರೆ.

ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ರೋಶನಿ ಸಭಾಂಗಣದಲ್ಲಿ ಮಹಿಳಾ ಉದ್ಯಮಿಗಳ ಉತ್ಪನ್ನ ಪ್ರದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಸಮಾವೇಶ ನಡೆಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ. ಹಾನಗಲ್ ತಾಲೂಕಿನ ಮಹಿಳಾ ಉದ್ಯಮಿಗಳಿಗೆ ಹೊಸ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಿನೂತನ ಸಮಾವೇಶ ಆಯೋಜನೆ ಮಾಡಲಾಗಿದೆ.

ಹ್ಯುಮ್ಯಾನಿಟಿ ಫೌಂಡೇಶನ್, ರೋಶನಿ ಸಮಾಜ ಸೇವಾ ಸಂಸ್ಥೆ, ಲೋಯಲಾ ವಿಕಾಸ ಕೇಂದ್ರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ 145ಕ್ಕೂ ಹೆಚ್ಚು ಮಹಿಳೆಯರು, 200ಕ್ಕೂ ಅಧಿಕ ಉತ್ಪನ್ನಗಳ ಪ್ರದರ್ಶನವಾಗಿದ್ದು, ಈ ವೇಳೆ ಮಾನೆಯವರು ಗಾರ್ಮೆಂಟ್ಸ್ ಉದ್ಯಮ ಆರಂಭಿಸುವುದಾಗಿ ಮಹತ್ವದ ಘೋಷಣೆಯೂ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ, ರೊಟ್ಟಿ, ಉಪ್ಪಿನಕಾಯಿ, ಮಸಾಲೆ ಪದಾರ್ಥ, ಅರಿಶಿಣ ಪುಡಿ, ಚಕ್ಕಲಿ, ಕೋಡುಬೇಳೆ, ಹಪ್ಪಳ, ಸಂಡಿಗೆ, ಹೋಳಿಗೆ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳು ಗಮನ ಸೆಳೆದವು. ಎಂಬ್ರಾಯ್ಡರಿ ವರ್ಕ್, ಆರಿ ವರ್ಕ್, ಸೀರೆ ಕುಚ್ಚು, ಮೇಣದಬತ್ತಿ, ಅಗರಬತ್ತಿ, ಕರ್ಪೂರ, ಹೆಣಿಗೆ ಚೀಲ ಸೇರಿದಂತೆ ಗೃಹಬಳಕೆಯ ವಸ್ತುಗಳ ಪ್ರದರ್ಶನ ನಡೆದಿತ್ತು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ವರ್ತಕರು, ಖರೀದಿದಾರರು ಮತ್ತು ಆನ್‌ಲೈನ್ ಮಾರುಕಟ್ಟೆ ತಜ್ಞರಿಂದ ಉತ್ಪನ್ನಗಳ ವೀಕ್ಷಣೆ ನಡೆಯಿತು. ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಆಕರ್ಷಕ ಪ್ಯಾಕಿಂಗ್, ಮಾರುಕಟ್ಟೆ ಬೇಡಿಕೆ ಹಾಗೂ ಆನ್‌ಲೈನ್ ಮಾರಾಟದ ಕುರಿತು ತಜ್ಞರು ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ಕೂಡ ನೀಡಿದರು.

ರಾಜ್ಯದಲ್ಲಿ ಬೇರೆ ಯಾವ ರಾಜಕಾರಣಿಯೂ ಮಾಡದಂತಹ ವಿಭಿನ್ನ ಪ್ರಯತ್ನಕ್ಕೆ ಶಾಸಕ ಶ್ರೀನಿವಾಸ ಮಾನೆ ಮುಂದಾಗಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಉದ್ಯಮಶೀಲತೆಯ ಮೊದಲ ಹೆಜ್ಜೆ ಮನೆಯಿಂದಲೇ ಆರಂಭವಾಗಬೇಕು. ಮಹಿಳೆಯರಲ್ಲಿ ಪರಿಶ್ರಮ, ಸೃಜನಶೀಲತೆ ಮತ್ತು ಸಾಧಿಸುವ ಛಲವಿದೆ. ಅತಿ ಶೀಘ್ರದಲ್ಲೇ ಹಾನಗಲ್‌ನಲ್ಲಿ ಗಾರ್ಮೆಂಟ್ಸ್ ಉದ್ಯಮ ಪ್ರಾರಂಭಿಸುತ್ತೇವೆ ಎಂದು ಮಾನೆ ಹೇಳಿದ್ದಾರೆ.

ಗಾರ್ಮೆಂಟ್ಸ್ ಉದ್ಯಮ ಆರಂಭಿಸುವ ಮೂಲಕ ಸ್ಥಳೀಯ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಗುರಿ ಇದೆ. ಮಹಿಳೆಯರಿಗೆ ಕೇವಲ ಪ್ರೋತ್ಸಾಹ ನೀಡುವುದಷ್ಟೇ ಅಲ್ಲದೆ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಉದ್ಯೋಗದ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಿದ್ದೇವೆ. ಮಹಿಳಾ ಉತ್ಪಾದಕಿ ಚಿಂತನಾ ಅವರಿಂದ ಸಮಾವೇಶದ ಬಗ್ಗೆ ಸಂತಸ ವ್ಯಕ್ತ; ತಮ್ಮ ಉತ್ಪನ್ನಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಸಂಪರ್ಕ ದೊರೆಯುವ ಭರವಸೆ ಮೂಡಿದೆ ಎಂದು ಶ್ರೀನಿವಾಸ್ ಮಾನೆ ಹೇಳಿದ್ದಾರೆ.

About The Author