ಗರ್ಭಿಣಿ ಪತ್ನಿಯನ್ನು ತೊರೆದು ರೈತ ಸಾವಿಗೆ ಶರಣು: ರಾಜ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

Political News: ಶಿಕಾರಿಪುರ ಶಿರಾಳಕೊಪ್ಪ ವ್ಯಾಪ್ತಿಯ ತಾಳಗುಂದ ಗ್ರಾಮದ ರೈತ ಬಿ.ಪಿ.ರಮೇಶ್‌ ಎಂಬುವವರು ಬೆಳೆ ನಷ್ಟದ ಕಾರಣಕ್ಕೆ ಗರ್ಭಿಣಿ ಪತ್ನಿಯನ್ನು ತೊರೆದು ಸಾವಿಗೆ ಶರಣಾಗಿದ್ದಾರೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ವ್ಯಾಪ್ತಿಯ ತಾಳಗುಂದ ಗ್ರಾಮದ ರೈತ ಶ್ರೀ ಬಿ.ಪಿ.ರಮೇಶ್‌ ಬೆಳೆ ನಷ್ಟದ ಪರಿಣಾಮವಾಗಿ ಗರ್ಭಿಣಿ ಪತ್ನಿಯನ್ನು ತೊರೆದು ಸಾವಿಗೆ ಶರಣಾಗಿರುವುದು ಬರಗಾಲದ ಬವಣೆಯ ಗಂಭೀರ ಪರಿಸ್ಥಿತಿಯನ್ನು ಸಾರಿ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದಿನ ಬೆಳಗಾದರೆ ಭ್ರಷ್ಟಾಚಾರ, ಸ್ಟಿಂಗ್‌ ಹಾಗೂ ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಹಿತ ಕಾಯುವುದಕ್ಕೆ ವ್ಯವಧಾನ ಇಲ್ಲವಾಗಿದೆ. ಪರಿಹಾರದ ರೂಪದಲ್ಲಿ ಬಿಡಿಗಾಸಿನ ನೆರವನ್ನೂ ನೀಡದೇ ರೈತರ ಬದುಕಿನೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ. ಆತ್ಮಹತ್ಯೆಗೆ ಶರಣಾದ ತಾಳಗುಂದ ರೈತನ ಸ್ಥಿತಿಯೇ ಇನ್ನೂ ಅನೇಕ ಅನ್ನದಾತರನ್ನು ಬಾಧಿಸುತ್ತಿರುವುದು ವಾಸ್ತವದ ಸಂಗತಿ ಎಂದು ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕ್ರೌರ್ಯ ಮನಸ್ಥಿತಿಯ ಕಾಂಗ್ರೆಸ್‌ ಸರ್ಕಾರ ರೈತರ ನೆರವಿಗೆ ಧಾವಿಸುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಬೆಳೆ ನಷ್ಟದಿಂದ ನೊಂದಿರುವ ರೈತರಿಗೆ ಆತ್ಮವಿಶ್ವಾಸ ತುಂಬುವ, ಅವರ ನೆರವಿಗೆ ಧಾವಿಸುವ ಯೋಗ್ಯತೆ ಇಲ್ಲದ ಈ‌ ಕಾಂಗ್ರೆಸ್ ಸರ್ಕಾರ ಯಾವ ನೈತಿಕತೆಯಿಂದ ಅಧಿಕಾರದಲ್ಲಿ ಉಳಿದಿದೆ? ಜನರ ಆಕ್ರೋಶದ ಕಟ್ಟೆ ಒಡೆದು ಈ ರೈತವಿರೋಧಿ ಸರ್ಕಾರವನ್ನು ಕಿತ್ತೊಗೆಯುವ ಪರಿಸ್ಥಿತಿ ಉದ್ಭವಿಸಿದೆ. ರೈತರ ಹಿತ ಕಾಯಲು ಬದ್ಧತೆ-ಯೋಗ್ಯತೆ ಇಲ್ಲದಿದ್ದರೆ ಈ ಕಾಂಗ್ರೆಸ್‌ ಸರ್ಕಾರ ಅಧಿಕಾರ ತ್ಯಜಿಸಿ ಹೋಗಲಿ, ಇಲ್ಲದಿದ್ದರೆ ಜನರೇ ಪಾಠ ಕಲಿಸುವ ದಿನಗಳನ್ನು ಎದುರು ನೋಡಲಿ.

ತಾಳಗುಂದದ ನತದೃಷ್ಟ ರೈತ, ಮೃತ ಶ್ರೀ ರಮೇಶ್‌ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ಆಘಾತಕ್ಕೀಡಾಗಿರುವ ಕುಟುಂಬದ ದುಃಖ-ಸಂಕಷ್ಟದೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡ ಬಯಸುವೆ ಎಂದು ವಿಜಯೇಂದ್ರ ಹೇಳಿದ್ದಾರೆ.

About The Author