ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ನಾಯಕಿ ಕೃಪಾ ಆಳ್ವಾಗೆ ಇದೀಗ ಕೋರ್ಟ್‌ನಿಂದ ಮತ್ತೊಂದು ಶಾಕ್ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 66ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ. ಹಾಗಾದ್ರೆ ಈ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೃಪಾ ಆಳ್ವಾ ಪಾತ್ರವೇನು? ಕೋರ್ಟ್ ಜಾಮೀನು ನಿರಾಕರಿಸಿದ್ದೇಕೆ?
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೃಪಾ ಆಳ್ವಾಗೆ ಸಂಕಷ್ಟ ಹೆಚ್ಚಾಗಿದೆ. ಬೆಂಗಳೂರಿನ 66ನೇ ಸಿಸಿಹೆಚ್ ನ್ಯಾಯಾಲಯ ಕೃಪಾ ಆಳ್ವಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಈ ಹಿಂದೆ ನವೆಂಬರ್ 2ರಂದು ಇದೇ ನ್ಯಾಯಾಲಯ ಕೃಪಾ ಆಳ್ವಾ ಸೇರಿದಂತೆ ವಿನೋದ್ ಕುಮಾರ್ ಮತ್ತು ಪ್ರಶಾಂತ್ ಕುಮಾರ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ತನಿಖೆಗೆ ಸಹಕರಿಸುವಂತೆ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಸೂಚಿಸಿತ್ತು.
ಇನ್ನು 2023ರ ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಸ್ಟಿಂಗ್ ವಿಡಿಯೋ 2026ರ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿತ್ತು. ಈ ವಿಡಿಯೋದಲ್ಲಿ ಕೃಪಾ ಆಳ್ವಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣದ ಷಡ್ಯಂತ್ರದಲ್ಲಿ ಅವರ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಕೃಪಾ ಆಳ್ವಾ ಈಗಾಗಲೇ ಮೂರು ಬಾರಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಹಳೆಯ ಮೊಬೈಲ್ ಫೋನ್ ನೀಡುವಂತೆ ಪೊಲೀಸರು ಸೂಚಿಸಿದ್ದರೂ, ಅದನ್ನು ಇನ್ನೂ ಹಸ್ತಾಂತರಿಸಿಲ್ಲ ಎನ್ನಲಾಗಿದೆ.
ಇದೀಗ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾಗೊಂಡಿರುವುದರಿಂದ ಕೃಪಾ ಆಳ್ವಾ ಅವರ ಮುಂದಿನ ಕಾನೂನು ನಡೆ ಕುತೂಹಲ ಮೂಡಿಸಿದೆ.




