Bengaluru: ಎತ್ತಿನಹೊಳೆ ಯೋಜನೆ ಸಾಧ್ಯವೇ ಇಲ್ಲ ಎಂದು ಟೀಕಿಸುತ್ತಿದ್ದವರಿಗೆ ಇಂದು ನಾವು ಕೆಲಸದ ಮೂಲಕವೇ ಉತ್ತರ ನೀಡುತ್ತಿದ್ದೇವೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಇಂದು ವಿಕಾಸಸೌಧದಲ್ಲಿ ಪ್ರೆಸ್ಮೀಟ್ ನಡೆಸಿ ಮಾತನಾಡಿರುವ ಸಚಿವರು, ತಮ್ಮ ಸರ್ಕಾರ ನಡೆಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಭರ್ಜರಿ ವೇಗ: 252.61 ಕಿ.ಮೀ. ಉದ್ದದ ಪೈಕಿ ಈಗಾಗಲೇ 232 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಕೇವಲ 5 ಕಿ.ಮೀ. ಕಾಮಗಾರಿ ಮಾತ್ರ ಬಾಕಿ ಇದೆ. ಕೇಂದ್ರ ಸರ್ಕಾರದ ಅನುಮತಿ ದೊರೆತ ತಕ್ಷಣ ವಾರದೊಳಗೆ ತುಮಕೂರಿಗೆ ಟ್ರಯಲ್ ರನ್ ಮೂಲಕ ನೀರು ಹರಿಸಲಾಗುವುದು ಹಾಗೂ ಮುಂದಿನ ಜೂನ್ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು ತಲುಪಿಸುವುದು ನಮ್ಮ ಸರ್ಕಾರದ ಸಂಕಲ್ಪ ಎಂದು ಸಚಿವರು ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ & ತುಂಗಾ ಲಿಫ್ಟ್: ಚಿತ್ರದುರ್ಗ ಜಿಲ್ಲೆಯ 80ಕ್ಕೂ ಹೆಚ್ಚು ಕೆರೆಗಳಿಗೆ ಈಗಾಗಲೇ ಭದ್ರಾ ನೀರು ತುಂಬಿಸಲಾಗಿದೆ. ಡಿಸೆಂಬರ್ 15 ರಿಂದ 25ರೊಳಗೆ ತುಂಗಾದಿಂದ ನೀರನ್ನು ಲಿಫ್ಟ್ ಮಾಡಿ ಟ್ರಯಲ್ ರನ್ ನಡೆಸಲಾಗುವುದು. ನವಿಲೆ ಡ್ಯಾಂ ಬೇಡಿಕೆಯನ್ನೂ ಆದ್ಯತೆಯ ಮೇರೆಗೆ ಈಡೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ವಾಸ್ತವಿಕ ನ್ಯಾಯ: ರೈತರು ಮತ್ತು ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ನಡೆಸಿದ ಸಂಘಟಿತ ಹೋರಾಟಕ್ಕೆ ಫಲ ಸಿಕ್ಕಿದೆ. 11 TMC ಹೆಚ್ಚುವರಿ ನೀರು ಕೇಳಿದ್ದ ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ನಮ್ಮ ರಾಜ್ಯಕ್ಕೆ ಸಿಕ್ಕ ವಾಸ್ತವಿಕ ನ್ಯಾಯವಾಗಿದೆ ಎಂದಿದ್ದಾರೆ.
ಅಂತರರಾಜ್ಯ ಜಲ ವಿವಾದಗಳ ಇತ್ಯರ್ಥಕ್ಕೆ ಮಾತುಕತೆ: ನಮ್ಮ ಮುಖ್ಯಮಂತ್ರಿಗಳು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳೊಂದಿಗೆ ನೇರ ಮಾತುಕತೆಗೆ ಮುಂದಾಗಿದ್ದು, ದಶಕಗಳ ಜಲ ವಿವಾದಗಳಿಗೆ ಸೌಹಾರ್ದಯುತ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಸಚಿವರು ಹೇಳಿದ್ದಾರೆ.
ವಿರೋಧ ಪಕ್ಷಗಳ ಟೀಕೆಗಳಿಗೆ ನಮ್ಮ ಜನಪರ ಕೆಲಸಗಳೇ ತಕ್ಕ ಉತ್ತರ ನೀಡಲಿವೆ. ನಾಡಿನ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಅನ್ನದಾತರ ಬದುಕು ಹಸನಾಗಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವರಾದ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.




