Bengaluru News: ಜಾಗತಿಕ ಸಾಮಾಜಿಕ ಜಾಲತಾಣ ಸಂಸ್ಥೆಯಾದ ಮೆಟಾ (Meta) ತನ್ನ ನಿಲುವು, ಕಾರ್ಯವೈಖರಿ ಹಾಗೂ ರಾಜಕೀಯ ವಿಚಾರಗಳಲ್ಲಿ ಅನುಸರಿಸುತ್ತಿರುವ ಧೋರಣೆಯನ್ನು ತೀವ್ರವಾಗಿ ಖಂಡಿಸಿ, ಸಂಸ್ಥೆಯ ರಾಜಕೀಯ ಪಕ್ಷಪಾತವನ್ನು ಜನರ ಮುಂದಿಡುವ ಉದ್ದೇಶದಿಂದ ಬೆಂಗಳೂರಿನ ಹಲವೆಡೆ ವಿನೂತನ ವ್ಯಂಗ್ಯಾತ್ಮಕ ಬ್ಯಾನರ್ಗಳನ್ನು ಅಳವಡಿಸಲಾಗಿದೆ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಎಚ್.ಎಸ್.ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಅವರನ್ನು ವ್ಯಂಗ್ಯವಾಗಿ ‘ಮಾರ್ಕ್ ಬೂಪ್ಬರ್ಗ್’ ಎಂದು ಬಿಂಬಿಸಿ, ‘ಮೆಟಾ ಬಿಜೆಪಿ ಕಾ ಬೇಠಾ’ ಎಂಬ ಘೋಷಣೆಯ ಮೂಲಕ ಸಂಸ್ಥೆಯ ರಾಜಕೀಯ ಪಕ್ಷಪಾತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣಗಳಿಗೆ ಕಡಿವಾಣ ಹಾಕುವಲ್ಲಿ ತಾರತಮ್ಯ, ಸುಳ್ಳು ಸುದ್ದಿಗಳ ಪ್ರಸಾರಕ್ಕೆ ಅವಕಾಶ, ರಾಜಕೀಯ ಪ್ರಭಾವಕ್ಕೆ ಮಣಿಯುವ ಧೋರಣೆ ಹಾಗೂ ಬಳಕೆದಾರರ ವೈಯಕ್ತಿಕ ಮಾಹಿತಿಯ ಗೌಪ್ಯತೆ ವಿಚಾರಗಳಲ್ಲಿ ಮೆಟಾ ಸಂಸ್ಥೆಯ ಕಾರ್ಯವೈಖರಿ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಇಂತಹ ಧೋರಣೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಯುವ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಸಾಮಾಜಿಕ ಮಾಧ್ಯಮಗಳು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡದೆ, ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಮೆಟಾ ಸಂಸ್ಥೆ ತನ್ನ ಪಕ್ಷಪಾತದ ಧೋರಣೆಯನ್ನು ಕೈಬಿಟ್ಟು ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.




