Magadi News: ಸುಳ್ಳು ಹೇಳುವುದರಲ್ಲಿ ಮತ್ತು ಅಸೂಯೆ ಪಡುವುದರಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪದ್ಮಶ್ರಿ ಪ್ರಶಸ್ತಿ ಸಿಗಬೇಕು ಎಂದು ಬಮೂಲ್ ಅಧ್ಯಕ್ಷ ಮತ್ತು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಮಾಧ್ಯಮದ ಜತೆ ಮಾತನಾಡಿರುವ ಅವರು, ರಾಜ್ಯ ಸರ್ಕಾರದ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದರ ವಿರುದ್ಧ ತಿರುಗೇಟು ನೀಡಿದ್ದಾರೆ.
ಅಭಿವೃದ್ಧಿ ಎದರೆ ಬರೀ ಕಟ್ಟಡಗಳಲ್ಲ. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವುದೇ ನಿಜವಾದ ಅಭಿವೃದ್ಧಿ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಮೂರುವರೆ ವರ್ಷವಾಗಿದೆ. ನಮ್ಮ ಗ್ಯಾರಂಟಿಗಳನ್ನು ಯಾವುದೋ ಜಾತಿಗೆ ಅಥವಾ ಪಕ್ಷಕ್ಕೆ ಸೀಮಿತವಾಗಿರಿಸಿದೇ, ಎಲ್ಲರಿಗೂ ತಲುಪಿಸಿದ್ದೇವೆ ಎಂದು ಡಿ.ಕೆ,ಸುರೇಶ್ ಹೇಳಿದ್ದಾರೆ.
ಅಲ್ಲದೇ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿರುವ ಸುರೇಶ್, ನಾವು ದಿವಾಳಿಯಾಗಿಲ್ಲ ಬದಲಾಗಿ ಗೃಹಜ್ಯೋತಿ ಮೂಲಕ ಮನೆ ಮನೆಗಳ ದೀಪ ಬೆಳಗಿಸಿದ್ದೇವೆ. ಕೇಂದ್ರ ಸರ್ಕಾರ 15 ಲಕ್ಷ ರೂಪಾಯಿ ನೀಡುತ್ತದೆ ಎಂದು ಹೇಳಿತ್ತು.. ಎಲ್ಲಿದೆ ಆ ಹಣ ಎಂದು ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ.
ಅಲ್ಲದೇ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇಲ್ಲಿ 1 ಸೇತುವೆ ಕೂಡ ನಿರ್ಮಿಸಿರಲಿಲ್ಲ. 25 ವರ್ಷ ರಾಜಕೀಯ ಮಾಡಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಎಲೆಕ್ಷನ್ ಪ್ರಚಾರ ಮಾಡುವಾಗ, ಮೇಕೆದಾಟು ಯೋಜನೆಗೆ 5 ನಿಮಿಷದಲ್ಲಿ ಸಹಿ ಮಾಡುತ್ತೇನೆ ಎಂದಿದ್ದರು. ಆದರೆ ಈಗೇಕೆ ಆ ಬಗ್ಗೆ ಮಾತನಾುತ್ತಿಲ್ಲವೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಂಸದ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.




