Political News: ಹಾಸನ ಸೈಬರ್ ಕ್ರೈಂ ಪೋಲೀಸರು ತಮಗೆ ನೋಟೀಸ್ ನೀಡಿದ್ದರ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಪೋಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ನನ್ನದು ಆರೋಪವಾಗಿರಲಿಲ್ಲ. ತನಿಖೆ ಮಾಡಲು ನಾನು ಆಗ್ರಹಿಸಿದ್ದೆ. ನನಗೆ ನೋಟೀಸ್ ನೀಡಿ ವಿಚಾರಣೆಗೆ ಕರೆಯಲು ಅವರ್ಯಾರು ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
10 ರೂಪಾಯಿ ಲಂಚ ಕೇಳಿದ್ರೂ ಅದನ್ನು ನನ್ನ ಗಮನಕ್ಕೆ ತನ್ನಿ ಎಂದು ಸಿಎಂ ಹೇಳಿದ್ದಾರೆ. ನನಗೆ ಬಂದ ಚಾಟ್ ಮಾಹಿತಿ ನೀಡಿ, ತನಿಖೆ ನಡೆಸಲು ಹೇಳಿದ್ದೆ. ಆದರೆ ನಾನು ಹೇಳಿದ ದಿನವೇ ಸಿಎಂ ಹಾಸನ ಜಿಲ್ಲಾಧಿಕಾರಿಗಳಿಗೆ ಕ್ಲೀನ್ ಚೀಟ್ ನೀಡಿದ್ದಾರೆ. ಸಿಎಂ ಕ್ಲೀನ್ಚೀಟ್ ನೀಡಿದ ಮೇಲೆ ನನ್ನಿಂದ ಇನ್ನೇನು ಮಾಹಿತಿ ಪಡೆಯಲಿದ್ದಾರೆಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನನ್ನನ್ನು ಭೇಟಿಯಾಗಲು ಪ್ರತಿದಿನ ಹಲವಾರು ಮಂದಿ ಬರುತ್ತಾರೆ. ಅಂಥವರಲ್ಲಿ ಓರ್ವ ಮುಸುಕುಧಾರಿ ಬಂದು ನನಗೆ ಈ ಬಗ್ಗೆ ಮಾಹಿತಿ ನೀಡಿದ್ದ. ಬಂದವರೆಲ್ಲರಿಗೂ ನಾವೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ. ಚಾಟ್ ಮಾಡಿದವರ ಸೆಲ್ ಫೋನ್ ಮತ್ತು ಡಿಸಿ ಪಿಎ ಫೋನ್ ಚೆಕ್ ಮಾಡಿದ್ರೆ, ಎಲ್ಲ ಸತ್ಯ ಆಚೆ ಬರುತ್ತದೆ. ತನಿಖೆ ಮಾಡಲು ಹೇಳಿದ್ರೆ ನನಗೇ ನೋಟೀಸ್ ನೀಡುತ್ತಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.




