ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ವಿಶ್ವನಾಥ್ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ನನ್ನನ್ನು ಕಾಂಗ್ರೆಸ್ ಸೇರಿಸಿದ್ದು ವಿಶ್ವನಾಥ್ ಎಂಬುದೇ ಶುದ್ಧ ಸುಳ್ಳು. ನನ್ನನ್ನು ಕರೆದುಕೊಂಡು ಹೋಗಿ ಕಾಂಗ್ರೆಸ್ ನ ಯಾವ ನಾಯಕರನ್ನು ಭೇಟಿ ಮಾಡಿಸಿದ್ದರು ಅಂತ ವಿಶ್ವನಾಥ್ ಅವರನ್ನೇ ಕೇಳಿ. ನಾನು ಕಾಂಗ್ರೆಸ್ ಸೇರಲು ಪಿರನ್ ಹಾಗೂ ಅಹಮದ್ ಪಟೇಲ್ ಕಾರಣರೇ ಹೊರತು ಕರ್ನಾಟಕದ ಯಾವೊಬ್ಬ ನಾಯಕರಲ್ಲ ಎಂದು ಸಿದ್ದರಾಮಯ್ಯ ಖಡಾಖಂಡಿತವಾಗಿ ಹೇಳಿದ್ದಾರೆ.
ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೊಂದು ಪ್ರಭಾವಶಾಲಿಯಾಗಿದ್ದರೆ ಅವರು ಯಾಕೆ ಕಾಂಗ್ರೆಸ್ ಬಿಟ್ಟರಂತೆ? ಅವರ ಈಗಿನ ಮಾತು ಮತ್ತು ನಡವಳಿಕೆಗಳನ್ನು ನೋಡಿದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದನ್ನು ಒಳಗಿಂದೊಳಗೆ ವಿರೋಧಿಸಿರಬಹುದೇ ಎಂಬ ಸಂಶಯ ನನ್ನನ್ನು ಕಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಸೇರಿದಂತೆ ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ನಮ್ಮಲ್ಲಿರುವ ಮಾನವೀಯತೆಯನ್ನು ನೋಡಿ ಕಲಿಯಬೇಕು. ಡಿ.ಕೆ ಶಿವಕುಮಾರ್ ಅವರಿಗೆ ಕಿವಿಮಾತು ಹೇಳುವುದೇನೋ ಸರಿ, ಆದರೆ ಅವರು ಯಾವಾಗ ಮಾನವೀಯತೆ, ಮನುಷ್ಯತ್ವವನ್ನು ಕಲಿಯುವುದು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಾನೂ ಸಗಣಿ ಬಾಚಿದ್ದೇನೆ, ಗಂಜಲ ಎತ್ತಿದ್ದೇನೆ. ಬಿಜೆಪಿಯ ಯಾವ ನಾಯಕರು ಈ ಕೆಲಸ ಮಾಡಿದ್ದಾರೆ? ಪಶು ಸಾಕಾಣಿಕೆ ಬಗ್ಗೆ ಅವರಿಗೇನು ಗೊತ್ತಿದೆ? ಹಸು- ಎತ್ತುಗಳಿಗೆ ವಯಸ್ಸಾದ ಮೇಲೆ ಅವನ್ನು ರೈತರು ಏನು ಮಾಡಬೇಕು? ಬಿಜೆಪಿಯವರ ಮನೆ ಬಾಗಿಲಿಗೆ ಕೊಂಡುಹೋಗಿ ಬಿಟ್ಟು ಬರಬೇಕೇ..? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ..