ಬೆಳಗಾವಿ: ಸುವರ್ಣಸೌಧ ಖಾಲಿ ಬಿದ್ದಿದೆ. ಸುವರ್ಣಸೌಧ ಕಟ್ಟಿದ ಉದ್ದೇಶ ಈಡೇರುತ್ತಿಲ್ಲ. ಮತ್ತು ಉತ್ತರ ಕರ್ನಾಟಕದ ಜನರ ಸಂಕಷ್ಟವನ್ನು ಕೇಳುವ ಉದ್ದೇಶದಿಂದ ಸುವರ್ಣಸೌಧ ಕಟ್ಟಿಸಿದ್ದು ಆದರೆ ಯಾವುದೇ ರೀತಿಯಲ್ಲಿ ಅಧಿವೇಶನ ನಡೆಸಲು ಹೊರತು ಖಾಲಿ ಬೀಳಿಸುವುದಕ್ಕಲ್ಲ ಎಂದು ಮಾಜಿ ಶಾಸಕ ಕೋನರೆಡ್ಡಿ ತಿಳಿಸಿದರು.ಆದರೆ ನಮಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಗ್ಗೆ ಅಪಾರ ವಿಶ್ವಾಸ ಇದೆ. ಅವರು ಈ ಸಮಸ್ಯೆ ಬಗೆಹರಿಸಬೇಕು ಎಂದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದೆ. ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಜ್ಞಾನ ಇದೆ. ಮುಖ್ಯವಾಗಿ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಬಗ್ಗೆ ಅಪಾರ ಜ್ಞಾನ ಇದೆ. ಇನ್ನು ಈ ಬಗ್ಗೆ ತಿಳಿವಳಿಕೆ ಇರುವ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಶಂಕರ ಪಾಟೀಲ ಈ ನೂತನ ಸಚಿವ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ. ಅವರೆಲ್ಲರೂ ಈ ಭಾಗದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದು ನಮ್ಮ ಆಸೆಯಾಗಿದೆ.
ಹೈದರಾಬಾದ್ ಕರ್ನಾಟಕದಂತೆ ಮುಂಬೈ ಕರ್ನಾಟಕವೂ ಹಿಂದುಳಿದಿದ್ದು, ಈ ಪ್ರಾಂತದ ಅಭಿವೃದ್ಧಿಗೆ ಸಂವಿಧಾನದ 371 ಜೆ. ಪ್ರಕಾರ ವಿಶೇಷ ಸ್ಥಾನ ಮಾನ ನೀಡಬೇಕು.
ಮಹದಾಯಿ ಯೋಜನೆ ಕಾರ್ಯಗತಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲು ಜೆಡಿಎಸ್ ವತಿಯಿಂದ ಸೋಮವಾರ ಬೆಳಗಾವಿಯಲ್ಲಿ ಪ್ರತಿಭಟನೆ ಮುಖಾಂತರ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ತಿಳಿಸಿದರು.
ಮಹದಾಯಿ ಯೋಜನೆಯ ಬಗ್ಗೆ ಕೇಂದ್ರ ಸರಕಾರಕ್ಕೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ. ಈ ಪ್ರಯತ್ನಗಳು ಆಗಬೇಕು.
ಮುಖ್ಯಮಂತ್ರಿ ಕೇಂದ್ರದ ಮುಂದೆ ಬೇಡಿಕೆ ಮಂಡಿಸಲು ಸಿದ್ಧರಾಗಬೇಕು. ಸಚಿವ ಸಂಪುಟಕ್ಕೆ ಶುಭ ಕೋರಿ ಬೇಡಿಕೆ ಮಂಡಿಸಲು ಜೆಡಿಎಸ್ ನಿರ್ಧರಿಸಿದೆ. ಮುಂಬೈ ಕರ್ನಾಟಕದ ಅಭಿವೃದ್ಧಿಗೆ 371 ಜೆ. ಪ್ರಕಾರ ವಿಶೇಷ ಸ್ಥಾನ ಮಾನ, ಮಹದಾಯಿ ಯೋಜನೆಯ ಶೀಘ್ರ ಅನುಷ್ಠಾನ ಸೇರಿದಂತೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಜೆಡಿಎಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ನೀಡುತ್ತೇವೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಅವರು ಜೆಡಿಎಸ್ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳ ಘೋಷಣೆ ಮಾಡಿದರು.
ನಾಗೇಶ್, ಕರ್ನಾಟಕ ಟಿವಿ, ಬೆಳಗಾವಿ




