Wednesday, October 15, 2025

Latest Posts

ಮಂತ್ರಾಲಯ ಮಠದಲ್ಲಿಂದು 350ನೇ ಆರಾಧನಾ ಸಂಭ್ರಮ.

- Advertisement -

www.karnatakatv.net : ರಾಯಚೂರು : ಬೇಡಿದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸೋ ಕಲಿಯುಗದ ಕಾಮಧೇನು, ಕಲ್ಪವೃಕ್ಷ ಗುರು ರಾಯರ ಮಂತ್ರಾಲಯ ಮಠದಲ್ಲಿಂದು 350ನೇ ಆರಾಧನಾ ಸಂಭ್ರಮ. ಆ ಕಾರಣಕ್ಕಾಗಿ ಇಂದಿನಿಂದ 7 ದಿನಗಳ ಕಾಲ ತುಂಗೆಯ ತಟದಲ್ಲಿ ಭಕ್ತಿಯ ಕಲರವ ಮೊಳಗಲಿದೆ. ಇದೇ ಅಗಸ್ಟ್ 24 ಕ್ಕೆ ಪೂರ್ವಾರಾಧನೆ, 25 ಕ್ಕೆ ಮದ್ಯ ಆರಾಧನೆ, 26 ಕ್ಕೆ ಉತ್ತರ ಆರಾಧನೆ ಜರುಗಲಿವೆ.

ಇಂದು ಸಂಜೆ ಮಠದ ಆವರಣದಲ್ಲಿ ಪೀಠಾಧಿಪತಿ ಸುಭುದೇಂದ್ರ ತೀರ್ಥ ಶ್ರೀಗಳಿಂದ ಧ್ವಜಾರೋಹಣ ನೆರವೇರಲಿದ್ದು ಆ ಮೂಲಕ ಆರಾಧನೆಗೆ ಚಾಲನೆ ದೊರೆಯಲಿದೆ.. ಕೋವಿಡ್ ನಂತರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಆರಾಧನಾ ಮಹೋತ್ಸವ ಇದಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಕೋವಿಡ್ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲನೆ ಮಾಡುವುದರ ಮುಖಾಂತರ ಈ ಬಾರಿಯ ಆರಾಧನೆಯನ್ನ ಆಚರಿಸಲಾಗುತ್ತಿದೆ.

ಆರಾಧನೆ ಹಿನ್ನಲೆ ದೇಶದ ಮೂಲೆ ಮೂಲೆಗಳಿಂದಲೂ ಜನ ಸಾಗರ ಹರಿದು ಬರ್ತಾ ಇದ್ದು, ಮಠಕ್ಕೆ ಬರುವ ಭಕ್ತರಿಗೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.. ಮಾಸ್ಕ್ ಧರಿಸಿದವರಿಗೆ ಮಾತ್ರ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.. ಶ್ರೀ ಮಠವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನ ಕೈಗೊಳ್ಳಲಾಗಿದ್ದು, ಈ ಬಾರಿ ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಮಂತ್ರಾಲಯ ಬೇರೆಯದ್ದೇ ರೀತಿಯಲ್ಲಿ ಗೋಚರಿಸಲಿದೆ.

ಮಠದ ಮುಂಭಾಗದಲ್ಲಿ ಭವ್ಯವಾದ ಕಾರಿಡಾರ್ ನಿರ್ಮಾಣಗೊಳ್ಳುತ್ತಿದ್ದು, ಭಕ್ತರಿಗಾಗಿ ಸಿದ್ಧಗೊಂಡಿರುವ ರಾಯರ ಇತಿಹಾಸ ಸಾರುವ, ಮತ್ತು ದಾಸ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವ ಬಹುಕೋಟಿ ವೆಚ್ಚದ ಮ್ಯೂಸಿಯಂ ಲೋಕಾರ್ಪಣೆಗೊಳ್ಳಲಿದೆ. ಒಟ್ನಲ್ಲಿ ಆರಾಧನಾ ಮಹೋತ್ಸವದ ಹಿನ್ನಲೆ ಮಠಕ್ಕೆ ಭೇಟಿ ನೀಡಿ, ತುಂಗಾ ನದಿಯಲ್ಲಿ ಮಿಂದು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತ್ತಿರುವ ಭಕ್ತರು ಸಾಕಷ್ಟು ಪುಳಕಿತರಾಗುತ್ತಿದ್ದಾರೆ.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss