ಓರ್ವ ಮನುಷ್ಯ ಹೊಂದಿರಬೇಕಾದ ಮುಖ್ಯ ಗುಣಗಳಿವು..

ಚಾಣಕ್ಯ ನೀತಿಯಲ್ಲಿ ಕೆಲ ನೀತಿಗಳನ್ನು ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಅದೇ ರೀತಿ ಇಂದು ನಾವು ಚಾಣಕ್ಯರ ಪ್ರಕಾರ ಮನುಷ್ಯನಲ್ಲಿರಬೇಕಾದ ಮುಖ್ಯ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದಾಗಿ ನಾವು ಭವಿಷ್ಯದ ಬಗ್ಗೆ ಚಿಂತಿಸಿ, ಗತಿಸಿ ಹೋದ ಕಾಲದ ಬಗ್ಗೆ ಯೋಚಿಸಿ ಕೊರಗುವ ಬದಲು, ವರ್ತಮಾನವನ್ನು ಖುಷಿ ಖುಷಿಯಾಗಿ ಕಳೆಯಬೇಕು ಅಂತಾರೆ ಚಾಣಕ್ಯರು.  ಕಳೆದು ಹೋದ ಸಮಯದ ಬಗ್ಗೆ ಚಿಂತಿಸುವುದರ ಬದಲು, ಇರುವ ಸಮಯವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ಅಂತಾರೆ ಚಾಣಕ್ಯರು.

ಎರಡನೇಯದಾಗಿ ಯಾವುದಾದರೂ ಕೆಲಸ ಮಾಡುವ ಮೊದಲು ಅದರ ಬಗ್ಗೆ ಡಂಗುರ ಸಾರಬಾರದು. ಬದಲಾಗಿ ಆ ಕೆಲಸವನ್ನು ಮಾಡಿ ತೋರಿಸಬೇಕು. ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸ ಮಾತನಾಡಬೇಕು ಅಂತಾರೆ ಚಾಣಕ್ಯರು. ಅದನ್ನು ಬಿಟ್ಟು ಕೆಲಸ ಮಾಡುವ ಮೊದಲೇ ಕೊಚ್ಚಿಕೊಳ್ಳಲು ಶುರು ಮಾಡಿ, ಆಮೇಲೆ ನಿಮಗೆ ಆ ಕೆಲಸ ಮಾಡಲಾಗದಿದ್ದಲ್ಲಿ, ನೀವು ಅಪಹಾಸ್ಯಕ್ಕೆ ಗುರಿಯಾಗುತ್ತೀರಿ.

ಮೂರನೇಯದಾಗಿ ಬೇರೆಯವರೊಂದಿಗೆ ಮಾತನಾಡುವಾಗ ನಿಗಾವಹಿಸಿ ಮಾತನಾಡಬೇಕು. ನೀವು ಮಾತನಾಡುವ ಮಾತು ಇತರರ ಮೇಲೆ ಒಳ್ಳೆಯ ಪರಿಣಾಮ ಬೀರಬೇಕೇ ಹೊರತು ಕೆಟ್ಟ ಪರಿಣಾಮವಲ್ಲ. ಏನಾದರೂ ಮಾತನಾಡುವಾಗ ದುಡುಕಿ ಮಾತನಾಡಿ, ಆಮೇಲೆ ಯಾಕಾದ್ರೂ ಇಂಥ ಮಾತನಾಡಿದ್ನೋ ಅಂತಾ ಪರಿತಪಿಸೋ ಬದಲು, ಯೋಚಿಸಿ ಮಾತನಾಡುವುದು ಉತ್ತಮ ಅಂತಾರೆ ಚಾಣಕ್ಯರು.

ನಾಲ್ಕನೇಯದಾಗಿ ನಿಯತ್ತಾಗಿ ದುಡಿದ ದುಡ್ಡು ನಮಗೆ, ಮೋಸ ಮಾಡಿ ದುಡಿದ ದುಡ್ಡು ಪರರಿಗೆ ಅಂತಾರೆ ಚಾಣಕ್ಯರು. ತಮ್ಮ ಚಾಣಕ್ಯ ನೀತಿಯಲ್ಲಿ ಈ ಬಗ್ಗೆ ಹೇಳಿರುವ ಚಾಣಕ್ಯರು, ಮನುಷ್ಯ ಕಷ್ಟಪಟ್ಟು ದುಡಿದು ತಿನ್ನಬೇಕೆ ಹೊರತು, ಬೇರೆಯವರಿಗೆ ಮೋಸ ಮಾಡಿ ಅಥವಾ ಬೇರೆಯವರಿಂದ ಕಸಿದು ತಿನ್ನಬಾರದು. ಯಾಕಂದ್ರೆ ನಿಯತ್ತಾಗಿ ದುಡಿದ ದುಡ್ಡು ನಮ್ಮ ಉಪಯೋಗಕ್ಕೆ ಬರುತ್ತದೆ. ಆ ದುಡ್ಡಿನ ಬಗ್ಗೆ ನಿಮ್ಮನ್ನು ಯಾರೂ ಕೇಳುವುದಿಲ್ಲ. ಆದ್ರೆ ನೀವೇನಾದರೂ ಮೋಸ ಮಾಡಿ ಹಣ ಸಂಪಾದಿಸಿದರೆ, ಅದರ ಲೆಕ್ಕ ಕೊಡುವ ಪರಿಸ್ಥಿತಿ ಬರುತ್ತದೆ. ಅಂಥ ಹಣ ಯಾವತ್ತಿದ್ದರೂ ಬೇರೆಯವರ ಪಾಲಾಗುತ್ತದೆ.

About The Author