ಸರ್ಕಾರ ಕೊರೊನಾ ನಿಯಂತ್ರಿಸಲು ಹಲವಾರು ಕ್ರಮಗಳನ್ನು ತಂದಿದೆ . ಆದರೆ ಸರ್ಕಾರವೇ ಈ ದಿನ ಯಡವಟ್ಟೊಂದನ್ನು ಮಾಡಿಕೊಂಡಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪರಿಷತ್‌ನ 25 ನೂತನ ಸದಸ್ಯರ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನೆರವೇರಿದೆ. ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಪರಿಷತ್ ಸದಸ್ಯರ 500ಕ್ಕೂ ಹೆಚ್ಚು ಬೆಂಬಲಿಗರು ಭಾಗಿಯಾಗಿದ್ದಾರೆ. ಆದ್ರೆ ಸರ್ಕಾರಿ ಕಾರ್ಯಕ್ರಮದಲ್ಲೇ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಕಾರ್ಯಕ್ರಮದಲ್ಲಿ ಎಷ್ಟು ಜನರು ಸೇರಿದ್ದಾರೆ, ನಿಯಂತ್ರಿಸಿದ್ದಾರಾ? ಇಲ್ಲಿ ಕೊವಿಡ್ ಇಲ್ಲವಾ?, ಗೃಹ ಸಚಿವರು ಏನು ಮಾಡುತ್ತಿದ್ದಾರೆ. ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದು ಹೇಗೆ? ಸರ್ಕಾರದವರು ನಮ್ಮನ್ನೇನು ಹೆದರಿಸುತ್ತಿದ್ದಾರಾ? ನನ್ನನ್ನ ಬಂಧಿಸಲಿ, ಸಿದ್ದರಾಮಯ್ಯರನ್ನೂ ಬಂಧಿಸಲಿ. ನಾವು ನೀರಿಗಾಗಿ ಪಾದಯಾತ್ರೆಯನ್ನು ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತದೆ, ಹೆದರಿಕೆ ಎಲ್ಲ ಊರಲ್ಲಿಟ್ಟುಕೊಳ್ಳಿ. ನಮ್ಮ ಪಾದಯಾತ್ರೆ ನಿಲ್ಲಿಸಲು ಇನ್ನೊಂದು ಜನ್ಮ ಎತ್ತಿಬರಬೇಕು. ಯಾರು ಬೇಕಾದ್ರೂ ನಮ್ಮನ್ನ ಬಂಧಿಸಲಿ. ನನ್ನನ್ನ ಬಂಧಿಸಲಿ, ಸಿದ್ದರಾಮಯ್ಯರನ್ನ, ಶಾಸಕರನ್ನ ಬಂಧಿಸಲಿ. ಕೊವಿಡ್ ರೂಲ್ಸ್‌ಗೆ ನಾವು ಗೌರವ ಕೊಡುತ್ತಿದ್ದೇವೆ. MLCಗಳ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ರೂಲ್ಸ್ ಬ್ರೇಕ್ ಆಗಿದೆ. ಗೃಹ ಸಚಿವರು ಏನು ಮಾಡ್ತಿದ್ದಾರೆ, ಇವರ ಮೇಲೆ ಕೇಸ್ ಹಾಕಿದ್ರಾ? ನಮ್ಮನ್ನ ಹೆದರಿಸುತ್ತಿದ್ದಾರಾ? ಯಾವು ಇಂತಹ ದೃಶ್ಯಗಳನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ ಇಲ್ಲ ಎಂದು ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.