ಕೆಲ ಹಿಂದೂಗಳಲ್ಲಿ ಯಾರಾದರೂ ನಿಧನರಾದ್ರೆ, ಅಂಥವರ ಪುರುಷ ಸಂಬಂಧಿಗಳು ಕೇಶ ಮುಂಡನ ಮಾಡಿಸಿಕೊಳ್ಳುತ್ತಾರೆ. ಯಾಕೆ ಕೇಶ ಮುಂಡನ ಮಾಡೋದು..? ಇದರ ಹಿಂದಿನ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನುಷ್ಯನ ಮೃತ್ಯುವಾದ ಮೇಲೆ ಅವನ ಸಂಬಂಧಿಕರು ಸರಿಯಾಗಿ ಶ್ರಾದ್ಧ ಕಾರ್ಯ, ಅಂತ್ಯ ಸಂಸ್ಕಾರ ಮಾಡದಿದ್ದಲ್ಲಿ, ಅವನ ಆತ್ಮಕ್ಕೆ ಸರಿಯಾಗಿ ಮುಕ್ತಿ ಸಿಗುವುದಿಲ್ಲ. ಅವನು ಪ್ರೇತವಾಗಿ ಅಲಿಯುತ್ತಾನೆಂದು ನಂಬಲಾಗಿದೆ. ಅದೇ ರೀತಿ, ಮನುಷ್ಯನ ಅಂತ್ಯ ಸಂಸ್ಕಾರ ಸರಿಯಾಗಿ, ಪದ್ಧತಿ ಪ್ರಕಾರವಾಗಿ ಮಾಡಿ, ದಾನ ಧರ್ಮ ಮಾಡಿದ್ದಲ್ಲಿ, ಆತ ಮುಂದಿನ ಜನ್ಮದಲ್ಲಿ ಒಳ್ಳೆಯ ಕುಟುಂಬದಲ್ಲಿ ಜನ್ಮ ತಾಳುತ್ತಾನೆ. ಅಥವಾ ಸ್ವರ್ಗಕ್ಕೆ ಹೋಗುತ್ತಾನೆಂಬ ನಂಬಿಕೆ ಇದೆ.
ಹಾಗಾಗಿ ಅಂತ್ಯ ಸಂಸ್ಕಾರ ಮತ್ತು ಶ್ರಾದ್ಧ ಕಾರ್ಯವನ್ನು ಸರಿಯಾಗಿ ಮಾಡಬೇಕು ಅಂತಾ ಹೇಳೋದು. ಈ ಅಂತ್ಯ ಸಂಸ್ಕಾರ, ಶ್ರಾದ್ಧ ಕಾರ್ಯ ಹಿಡಿಯುವ ಮಾಡುವ ಕೆಲಸವೇ ಕೇಶ ಮುಂಡನ. ಈ ಕೇಶ ಮುಂಡನ ಮಾಡಲು ಮೊದಲ ಕಾರಣ ಸ್ವಚ್ಛತೆ. ಯಾಕಂದ್ರೆ ಪುರುಷರು ಅಂತ್ಯ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಹೋಗಿ ಬಂದಿರುತ್ತಾರೆ. ಶವವನ್ನು ಮುಟ್ಟಿರುತ್ತಾರೆ. ಶವವಿಟ್ಟ ಮನೆಯಲ್ಲಿಯೇ ಇರುತ್ತಾರೆ. ಹೀಗಾಗಿ ಆತನ ದೇಹ ಸ್ವಚ್ಛವಾಗಿರಬೇಕು, ಶುದ್ಧವಾಗಿರಬೇಕು, ಆರೋಗ್ಯವಾಗಿರಬೇಕು ಅಂದ್ರೆ ಕೇಶ ಮುಂಡನ ಮಾಡಿಕೊಳ್ಳಬೇಕು, ಉಗುರು ಕತ್ತರಿಸಿಕೊಳ್ಳಬೇಕು ಮತ್ತು ಸ್ನಾನ ಮಾಡಬೇಕಾಗುತ್ತದೆ.
ಇನ್ನೊಂದು ಕಾರಣ ಅಂದ್ರೆ, ಸತ್ತವರಿಗಾಗಿ ಗೌರವ ಸಲ್ಲಿಸುವುದಕ್ಕೆ ಕೇಶಮುಂಡನ ಮಾಡಲಾಗುತ್ತದೆ. ತೀರಿಕೊಂಡವರು ಕುಟುಂಬಸ್ಥರ ಕಷ್ಟ ಸುಖದಲ್ಲಿ ಭಾಗಿಯಾಗಿರುತ್ತಾರೆ. ಅವರಿಗೆ ಪ್ರೀತಿ ಪಾತ್ರರಾಗಿರುತ್ತಾರೆ. ಹಾಗಾಗಿ ಅವರಿಗೆ ಗೌರವ ಸೂಚಿಸುವುದಕ್ಕೂ ಕೇಶ ಮುಂಡನ ಮಾಡಿಸಲಾಗುತ್ತದೆ. ಹೀಗೆ ಗೌರವಿಸುವುದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.