ಶಿವನೆಂದರೆ ಸುಂದರ, ಶಿವನೆಂದರೆ ಸತ್ಯ, ಹಾಗಾಗಿಯೇ ಹೇಳಿದ್ದು, ಸತ್ಯ ಶಿವಂ ಸುಂದರಂ ಎಂದು. ಇಂಥ ಸೃಷ್ಟಿಕರ್ತ ಶಿವ, ಆಡಂಬರದ ಆಭರಣ ಹಾಕಲಿಲ್ಲ. ಬದಲಾಗಿ ಸರ್ಪ, ರುಂಡಗಳ ಮಾಲೆಯೇ ಅವನ ಆಭರಣ. ಆಯುಧವೆಂದರೆ ತ್ರಿಗುಣ ಸಂಪನ್ನ ತ್ರಿಶೂಲ. ಉಡುಪೆಂದರೆ, ಹುಲಿಚರ್ಮ. ರಥವೆಂದರೆ ನಂದಿ. ಮಂತ್ರಿ ಭೃಂಗಿ. ಭಸ್ಮದ ಸ್ನಾನ, ಸ್ಮಶಾನ ವಾಸವೇ ಶಿವನಿಗಿಷ್ಟ. ಇಂಥ ಶಿವನ ತಲೆಯ ಮೇಲೆ ಕಿರೀಟವಾಗಿ ರಾರಾಜಿಸುವನೇ ಚಂದ್ರ. ಹಾಗಾದ್ರೆ ಚಂದ್ರ ಶಿವನ ಜಟೆಯನ್ನೇಕೆ ಏರಿದ..? ಇದರ ಹಿಂದಿರುವ ಕಥೆಯೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸಮುದ್ರ ಮಂಥನದ ಸಮಯದಲ್ಲಿ ಬಂದ ಅಮೃತವನ್ನು ಸ್ವೀಕರಿಸಲು ದೇವ-ದಾನವರು ತಯಾರಿದ್ದರು. ಆದ್ರೆ ವಿಷವನ್ನು ಸ್ವೀಕರಿಸಲು ಯಾರೂ ತಯಾರಿರಲಿಲ್ಲ. ಹಾಗಾಗಿ ಶಿವ ಪ್ರತ್ಯಕ್ಷನಾಗಿ ವಿಷ ಸೇವಿಸಿದ. ಆಗ ಅವನ ದೇಹದ ಉಷ್ಣತೆ ಹೆಚ್ಚಿತು. ಹಾಗಾಗಿ ಆ ಉಷ್ಣ ಮಸ್ತಿಷ್ಕವನ್ನು ಪ್ರವೇಶಿಸಬಾರದೆಂಬ ಕಾರಣಕ್ಕೆ, ದೇವತೆಗಳೆಲ್ಲ ಸೇರಿ, ಚಂದ್ರನನ್ನು ತಲೆಯ ಮೇಲೆ ಕೂರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಆಗ ಶಿವ ಅರ್ಧ ಚಂದ್ರನನ್ನು ತಲೆ ಮೇಲಿರಿಸಿಕೊಂಡ. ಈ ಕಾರಣಕ್ಕೆ ಚಂದ್ರ ಶಿವನ ಜಟೆಯಲ್ಲಿ ಸುಶೋಭಿತನಾಗಿದ್ದಾನೆ.
ಎರಡನೇಯ ಕಥೆಯ ಪ್ರಕಾರ, ದಕ್ಷ ಪ್ರಜಾಪತಿ ತನ್ನ 27 ಹೆಣ್ಣು ಮಕ್ಕಳನ್ನು ಚಂದ್ರನಿಗೆ ವಿವಾಹ ಮಾಡಿಕೊಡುತ್ತಾನೆ. ಆದ್ರೆ ಆ 27 ಪತ್ನಿಯರಲ್ಲಿ ಚಂದ್ರನಿಗೆ ರೋಹಿಣಿ ಎಂದರೆ ಬಲುಪ್ರೀತಿ. ಅವನು ಸದಾ ಆಕೆಯ ಜೊತೆ ಕಾಲ ಕಳೆಯುತ್ತಿದ್ದ. ಆಕೆಯನ್ನ ಹೆಚ್ಚಾಗಿ ಪ್ರೀತಿಸುತ್ತಿದ್ದ. ಇದನ್ನ ನೋಡಿ ಉಳಿದ ಪತ್ನಿಯರಿಗೆ ಬೇಸರವಾಗುತ್ತದೆ. ಅವರು ತಮ್ಮ ತಂದೆಯ ಬಳಿ ಹೋಗಿ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಾರೆ. ಆಗ ದಕ್ಷ, ಚಂದ್ರನನ್ನು ಕುರಿತು, ನೀನು ನನ್ನ ಮಕ್ಕಳಿಗೆ ಬೇಸರ ಮಾಡಿದ್ದಕ್ಕಾಗಿ, ಕ್ಷಯ ರೋಗಕ್ಕೆ ತುತ್ತಾಗು ಎಂದು ಶಾಪ ನೀಡಿದ.
ಶಾಪಕ್ಕೆ ಗುರಿಯಾದ ಚಂದ್ರ, ಕ್ಷಯರೋಗದಿಂದ ಹಾಸಿಗೆ ಹಿಡಿದ. ಚಂದ್ರನ ಪರಿಸ್ಥಿತಿ ನೋಡಲಾಗದ ನಾರದ, ಶಿವನನ್ನು ಆರಾಧಿಸು ಎಂದು ಸಲಹೆ ನೀಡಿದರು. ಆಗ ಚಂದ್ರ ತಡಮಾಡದೇ, ಶಿವನನ್ನು ಆರಾಧಿಸಲಾರಂಭಿಸಿದ. ಚಂದ್ರನ ಪ್ರಾರ್ಥನೆಗೆ ಮೆಚ್ಚಿದ ಶಿವ, ಚಂದ್ರನನ್ನು ಆರೋಗ್ಯವಂತನನ್ನಾಗಿ ಮಾಡಿ, ತನ್ನ ಜಟೆಯ ಮೇಲೆ ಕೂರಿಸಿಕೊಂಡ. ಹಾಗಾಗಿಯೇ ಅನಾರೋಗ್ಯ ಪೀಡಿತರು ಶಿವನನ್ನು ಆರಾಧಿಸಬೇಕೆಂದು ಹಿರಿಯರು ಹೇಳುತ್ತಾರೆ.