ಕನ್ನಡದಲ್ಲಿ ಹಲವು ಸಿನಿಮಾಗಳನ್ನ ಹೊಂಬಾಳೆ ನಿರ್ಮಾಣ ಸಂಸ್ಥೆ ಮಾಡಿದೆ. ಹಾಗೂ ‘ಕೆಜಿಎಫ್’ ಸರಣಿ ಸಿನಿಮಾಗಳನ್ನು ಮಾಡಿ ಬೀಗಿದ್ದಾರೆ. ‘ಕೆಜಿಎಫ್-2’ ಸಿನಿಮಾ ಅಂತೂ ಎಲ್ಲಾ ನಿರೀಕ್ಷೆಗಳನ್ನು ಮೀರಿ ಸೂಪರ್ ಹಿಟ್ ಲಿಸ್ಟ್ ಸೇರಿದೆ. ವಿಶ್ವವೇ ದಕ್ಷಿಣ ಭಾರತವನ್ನು ತಿರುಗಿ ನೋಡುವಂತೆ ಮಾಡಿದೆ.
ಇದೀಗ ಹೊಂಬಾಳೆ ನಿರ್ಮಾಣ ಸಂಸ್ಥೆ ಹೊಸ ಹೆಜ್ಜೆಯತ್ತ ಸಾಗುತ್ತಿದೆ. ಅದೇನಪ್ಪ ಹೊಂಬಾಳೆ ಸಂಸ್ಥೆ ಇದೀಗ ಬಾಲಿವುಡ್‌ನಲ್ಲೂ ಶಾಖೆ ತೆರೆಯಲು ಮುಂದಾಗಿದೆ. ಈಗಾಗಲೇ ಸ್ಟಾರ್ ಹೀರೋ ಜೊತೆಗೆ ಮಾತು ಕಥೆ ನಡೆಸಿರುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನದಲ್ಲಿ ಮಾತನಾಡಿದ್ದು, “ನಾವು ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಇದರ ಜೊತೆಗೆ ಹಿಂದಿ ಸಿನಿಮಾಗಳನ್ನು ಮಾಡುವ ಯೋಜನೆಯನ್ನು ಹೊಂದಿದ್ದೇವೆ. ಎಲ್ಲವೂ ಸರಿಯಾಗಿ ಹೊಂದಾಣಿಕೆ ಆದರೆ ಮುಂದಿನ 3-4 ತಿಂಗಳಲ್ಲಿ ಸಿನಿಮಾ ಘೋಷಣೆ ಮಾಡುತ್ತೇವೆ. ಈ ಚರ್ಚೆ ಇದೀಗ ಆರಂಭಿಕ ಹಂತದಲ್ಲಿದೆ, ಆದರೆ ನಾವು ಖಂಡಿತವಾಗಿ, ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸುವ ಯೋಜನೆಯನ್ನು ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ.
ಹೊಂಬಾಳೆ ನಿರ್ಮಾಣ ಸಂಸ್ಥೆ ಬಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಿದೆ ಎನ್ನುತ್ತಿದ್ದಂತೆ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಹೆಸರು ಕೇಳಿ ಬರುತ್ತಿದೆ. ಇನ್ನು ತಮ್ಮ ಸಿನಿಮಾಗಾಗಿ ನಿರ್ದೇಶಕರನ್ನು ಹುಡುಕುತ್ತಿರುವುದಾಗಿ ವಿಜಯ್ ಕಿರಗಂದೂರು ಹೇಳಿಕೊಂಡಿದ್ದಾರೆ.
ಹೊಂಬಾಳೆ ಫಿಲಂಸ್ ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗಿನಲ್ಲಿ, ತಮಿಳು, ಮಲಯಾಳಂನಲ್ಲೂ ಸಿನಿಮಾ ಮಾಡುತ್ತಿರುವ ಬಗ್ಗೆ ಹೇಳಿದ್ದು, “ನಾವು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡುತ್ತಿದ್ದೇವೆ. ಬಿಟ್ಟರೆ ಸದ್ಯಕ್ಕೆ ಒಂದು ತಮಿಳು ಸಿನಿಮಾ ಮತ್ತು ಒಂದು ಮಲಯಾಳಂ ಸಿನಿಮಾ ಮಾಡುತ್ತಿದ್ದೇವೆ” ಎಂದು ವಿಜಯ್ ಕಿರಗಂದೂರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ