ಬೆಂಗಳೂರು: ಇಂದು ಕಾರು ಜೋರಾಗಿ ಓಡಿಸಿ, ಸಿಗ್ನಲ್ ಜಂಪ್ ಮಾಡಿದ್ದಲ್ಲದೇ, ಸೀಟ್ ಬೆಲ್ಟ್ ಕೂಡ ಧರಿಸದೇ ಇದ್ದ ಕಾರಣ, ಕಾರು ತಡೆದು ನಿಲ್ಲಿಸಿದಂತ ಸಂಚಾರಿ ಪೊಲೀಸರೊಂದಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿಕೊಂಡಿದ್ದರು. ನಾನ್ ಎಂ.ಎಲ್ಎ ಪುತ್ರಿ ಎಂಬುದಾಗಿ ದರ್ಪತೋರಿ, ಸಾರ್ವಜನಿಕವಾಗಿ ಪೊಲೀಸರನ್ನು ನಿಂದಿಸಿದ ಘಟನೆ ವೈರಲ್ ಆಗುತ್ತಿದ್ದಂತೇ, ಎಚ್ಚೆತ್ತಿರುವಂತ ಶಾಸಕ ಅರವಿಂದ ಲಿಂಬಾವಳಿ ಅವರು, ಇದೀಗ ಕ್ಷಮೆಯಾಚಿಸಿದ್ದಾರೆ.
ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸೋದು ಕಡ್ಡಾಯ. ಸಿಗ್ನಲ್ ಜಂಪ್ ಕೂಡ ಮಾಡೋದು ಸಂಚಾರಿ ನಿಯಮ ಉಲ್ಲಂಘಿಸಿದಂತೆ, ಈ ಪ್ರಕರಣದಲ್ಲಿ ಪೊಲೀಸರು ದಂಡ ವಿಧಿಸಲಿದ್ದಾರೆ. ಹೀಗೆ ಇಂದು ಸಿಗ್ನಲ್ ಜಂಪ್ ಮಾಡಿ, ಸೀಟ್ ಬೆಲ್ಟ್ ಕೂಡ ಧರಿಸದೇ ಇದ್ದದ್ದು ಪ್ರಶ್ನಿಸಿದಂತ ಸಂಚಾರಿ ಪೊಲೀಸರೊಂದಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿದ್ದರು.
ನಾನು ಯಾರ್ ಅಂತ ಗೊತ್ತಾ.? ಶಾಸಕರ ಪುತ್ರಿ, ನನ್ನ ಕಾರನ್ನೇ ತಡೆಯುತ್ತೀರಾ.? ಹಾಗೇ, ಹೀಗೆ ಎಂಬುದಾಗಿ ಸಂಚಾರಿ ಪೊಲೀಸರೊಂದಿಗೆ ದೊಡ್ಡ ರದ್ಧಾಂತವನ್ನೇ ನಡೆಸಿದ್ದರು. ಆದ್ರೇ ಪೊಲೀಸರು ಮಾತ್ರ ಈಗ ಸೀಟ್ ಬೆಲ್ಟ್ ಧರಿಸದ್ದು, ಸಿಗ್ನಲ್ ಜಂಪ್ ಮಾಡಿದ್ದು ಸೇರಿ ಹಳೆಯ ನಿಯಮ ಉಲ್ಲಂಘಿಸಿದಂತ ಪ್ರಕರಣಗಳು ಸಹಿತ 10 ಸಾವಿರ ದಂಡ ಕಟ್ಟುವಂತೆ ಪಟ್ಟು ಹಿಡಿದ್ರು. ಕೊನೆಗೆ ವಿಧಿಯಿಲ್ಲದೇ ದಂಡವನ್ನು ಕಟ್ಟುವಂತೆ ಆಗಿತ್ತು.
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯವರ ಪುತ್ರಿಯ ವರ್ತನೆಯ ಬಗ್ಗೆ ಜನರು ಕಿಡಿಕಾರಿದ್ದರು. ಶಾಸಕರ ಪುತ್ರಿಯ ದರ್ಪಕ್ಕೆ ಕಿಡಿಕಾರಿದ್ದರು. ಈ ಬೆನ್ನಲ್ಲೇ ಎಚ್ಚೆತ್ತಂತ ಶಾಸಕ ಅರವಿಂದ ಲಿಂಬಾವಳಿಯವರು ನನ್ನ ಮಗಳ ವರ್ತನೆಯಿಂದ ನೋವಾಗಿದ್ದರೇ ಕ್ಷಮಿಸಿ. ನನ್ನ ಮಗಳು ರೇಣುಕಾ ಅವರ ಸ್ನೇಹಿತ ತರುಣ್ ಕಾರ್ ಜೋರಾಗಿ ಓಡಿಸಿ, ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. ಆತನೇ ದಂಡ ಕೂಡ ಕಟ್ಟಿದ್ದಾನೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.