Hubli: ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋ ಚಾಲಕರು ಎಷ್ಟರ ಮಟ್ಟಿಗೆ ನಂಬಿಕಸ್ಥರು..?

Hubli News: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದೊಯ್ಯಬೇಕಾದ ಆಟೋಗಳೇ ಅಪಾಯದ ವಾಹನಗಳಾಗುತ್ತಿವೆಯಾ? ಆರು ಮಕ್ಕಳನ್ನು ಕರೆದೊಯ್ಯುವ ಸಾಮರ್ಥ್ಯದ ಆಟೋಗಳಲ್ಲಿ ಹತ್ತು, ಹದಿಮೂರು ಮಕ್ಕಳನ್ನು ಕುರಿಮಂದೆಯಂತೆ ತುಂಬಿಕೊಂಡು ಶಾಲೆಗೆ ಕರೆದೊಯ್ಯಲಾಗುತ್ತಿದೆ. ನಿಯಮಗಳ ಪಾಲನೆಯಿಲ್ಲ, ಮಕ್ಕಳ ಸುರಕ್ಷತೆಗೆ ಆದ್ಯತೆಯಿಲ್ಲ. ಇಷ್ಟೆಲ್ಲ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳ ಕ್ರಮ ಮಾತ್ರ ಎಲ್ಲಿದೆ ಎಂಬ ಪ್ರಶ್ನೆ ಎದುರಾಗಿದೆ. ಈ ಕುರಿತ ವರದಿ ಇಲ್ಲಿದೆ.

ಹುಬ್ಬಳ್ಳಿಯ ಪ್ರತಿಷ್ಠಿತ ಶಾಲೆಗಳ ಮುಂದೆ ಪ್ರತಿದಿನ ಕಾಣುವ ದೃಶ್ಯಗಳಿವು. ಆರು ಮಕ್ಕಳು ಕೂರಬೇಕಾದ ಆಟೋಗಳಲ್ಲಿ ಹತ್ತು, ಹನ್ನೆರಡು, ಕೆಲವೊಮ್ಮೆ ಹದಿಮೂರು ಮಕ್ಕಳನ್ನು ತುಂಬಿಕೊಂಡು ಕರೆದೊಯ್ಯಲಾಗುತ್ತಿದೆ. ಒಬ್ಬರ ಮೇಲೊಬ್ಬರು ಕುಳಿತುಕೊಳ್ಳುವ ಸ್ಥಿತಿ, ಹೊರಚಾಚುವ ಕಾಲುಗಳು, ಬ್ಯಾಗ್‌ಗಳು… ಸಣ್ಣ ಬ್ರೇಕ್ ಹಾಕಿದರೂ ಮಕ್ಕಳಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ.

ಪೋಷಕರು ತಿಂಗಳಿಗೆ 800ರಿಂದ 1000 ರೂಪಾಯಿ ನೀಡಿ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುತ್ತಿದ್ದೇವೆ ಎಂದು ನಂಬಿದ್ದಾರೆ. ಆದರೆ ಆಟೋಗಳಲ್ಲಿನ ಅತಿಯಾದ ಮಕ್ಕಳ ಸಾಗಣೆ ಆ ನಂಬಿಕೆಗೆ ಧಕ್ಕೆ ತರುತ್ತಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವ ಈ ವ್ಯವಸ್ಥೆ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಆಟೋ ಚಾಲಕರ ಈ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಬೇಕಾದವರು ಯಾರು? ಪರವಾನಗಿ ಮತ್ತು ವಾಹನಗಳ ನಿಯಮಿತ ಪರಿಶೀಲನೆ ಮಾಡಬೇಕಾದ ಆರ್‌ಟಿಒ ಇಲಾಖೆ, ರಸ್ತೆಯಲ್ಲಿ ಸಂಚಾರ ನಿಯಂತ್ರಿಸುವ ಟ್ರಾಫಿಕ್ ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿಗಳು ಈ ಬಗ್ಗೆ ಗಮನಹರಿಸಬೇಕಿದೆ.

ಒಂದೆಡೆ ಪೋಷಕರಲ್ಲಿ ಮಕ್ಕಳ ಸುರಕ್ಷತೆಯ ಆತಂಕ, ಮತ್ತೊಂದೆಡೆ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ. ಇಂತಹ ಸಂದರ್ಭದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಆಟೋಗಳಲ್ಲಿ ಕರೆದೊಯ್ಯುವುದು ಅಪಘಾತದ ಅಪಾಯವನ್ನು ಹೆಚ್ಚಿಸಬಹುದು. ಈ ಬಗ್ಗೆ ಸ್ಥಳೀಯ ನಿವಾಸಿಗಳೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಒಂದು ವೇಳೆ ಅಪಘಾತ ಸಂಭವಿಸಿದರೆ ಆಟೋದಲ್ಲಿ ಪ್ರಯಾಣಿಸುತ್ತಿರುವ ಮಕ್ಕಳ ಸುರಕ್ಷತೆಯ ಹೊಣೆ ಯಾರು ಹೊರುತ್ತಾರೆ? ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಚಿತವಾಗಿಯೇ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಲ್ಲವೇ?

ಶಾಲಾ ವಾಹನಗಳ ಪರಿಶೀಲನೆ ನಡೆಯುತ್ತಿದೆಯೇ? ನಿಯಮ ಉಲ್ಲಂಘಿಸುವ ಆಟೋ ಚಾಲಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ? ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಉತ್ತರ ನೀಡಬೇಕಿದೆ.

ಮಕ್ಕಳು ದೇಶದ ಭವಿಷ್ಯ. ಅವರ ಸುರಕ್ಷತೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ಇರಬಾರದು. ಶಾಲೆಗೆ ಹೋಗುವ ದಾರಿಯೇ ಮಕ್ಕಳ ಪಾಲಿಗೆ ಅಪಾಯದ ದಾರಿಯಾಗಬಾರದು. ನಿಯಮ ಮೀರುವ ಚಾಲಕರ ವಿರುದ್ಧ ಕ್ರಮ, ಶಾಲಾ ಮಕ್ಕಳ ಸಾಗಣೆ ವ್ಯವಸ್ಥೆಯ ಪರಿಶೀಲನೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.

ಮಕ್ಕಳ ಜೀವಕ್ಕೆ ಅಪಾಯ ಎದುರಾದ ಮೇಲೆಯೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ? ಅಥವಾ ಅನಾಹುತಕ್ಕೂ ಮುನ್ನವೇ ಕ್ರಮ ಕೈಗೊಳ್ಳುತ್ತಾರಾ? ಕಾದು ನೋಡಬೇಕಿದೆ.

ಕ್ಯಾಮೆರಾ ಪರ್ಸನ್ ಹೇಮಂತ್ ಕುಮಾರ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author