ವಿಧಾನ ಪರಿಷತ್ ನ ವಾಯವ್ಯ ಮತ್ತು ದಕ್ಷಿಣ ಪದವೀಧರರ ಕ್ಷೇತ್ರಗಳು ಹಾಗೂ ವಾಯುವ್ಯ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ ಇಂದು ರಾಜ್ಯದ 11 ಜಿಲ್ಲೆಯ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ.
ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 417 ಮತಘಟ್ಟೆಗಳನ್ನು ತೆರೆಯಲಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು ಬೆಳಗ್ಗೆ 8 ರಿಂದ 5 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದ್ದು, ಬುಧವಾರ ಮತ ಎಣಿಕೆ ನಡೆಯಲಿದೆ.
ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಮೈ.ವಿ ರವಿಶಂಕರ್, ಜೆಡಿಎಸ್ ನ ಎಚ್.ಕೆ ರಾಮು, ಕಾಂಗ್ರೆಸ್ ನ ಮಧು ಜಿ.ಮಾದೇಗೌಡ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಪಕ್ಷೇತರ ಪ್ರಸನ್ನ ಎನ್.ಗೌಡ ಸೇರಿದಂತೆ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 150 ಮತಗಟ್ಟೆಗಳನ್ನು ತೆರೆದಿದ್ದು, 1.41ಲಕ್ಷ ಮತದಾರರಿದ್ದಾರೆ.
ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಪಚ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ್ ಹೊರಟ್ಟಿ, ಕಾಂಗ್ರೆಸ್ ನ ಬಸವರಾಜ್ ಗುರಿಕಾರ, ಜೆಡಿಎಸ್ ನ ಶ್ರೀಶೈಲ ಗಡದಿನ್ನಿ ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗೂ 17.973 ಶಿಕ್ಷಕರು ಈ ಕ್ಷೇತ್ರದ ಮತದಾರರಿದ್ದಾರೆ.
ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಣಮಂತ ನಿರಾಣಿ, ಕಾಂಗ್ರೆಸ್ ಸುನೀಲ ಸಂಕ ಸೇರಿದಂತೆ 11 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 99.597 ಮತದಾರರಿದ್ದಾರೆ. ಇದೇ ಜಿಲ್ಲೆಗಳ ವ್ಯಾಪ್ತಿಯ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಅರುಣ ಶಹಾಪುರ, ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ, ಜೆಡಿಎಸ್ ನ ಚಂದ್ರಶೇಖರ್ ಲೋಣಿ, ಪಕ್ಷೇತರರಾದ ಎನ್.ಬಿ ಬನ್ನೂರ ಸೇರಿದಂತೆ 25.388 ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
ಮತಘಟ್ಟೆ ಸಿಬ್ಬಂದಿ ಭಾನುವಾರ ಸಂಜೆಯೇ ನಿಗದಿತ ಸ್ಥಳ ತಲುಪಿದ್ದಾರೆ. ಇನ್ನು ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಪ್ರತಿ ಮತಘಟ್ಟೆಗೂ ಪಿಪಿಇ ಕಿಟ್ ಒದಗಿಸಲಾಗಿದೆ.