ಕಾಂಗ್ರೆಸ್ ಪಕ್ಷ, ಈದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರ ಗೀತೆ ತಂದುಕೊಟ್ಟ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ ಅಂತಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಆಹಾರ ಕಾಯ್ದೆ ಪದ್ಧತಿ ಜಾರಿಗೆ ತಂದ್ವಿ. ಫ್ರೀ ಅಕ್ಕಿ ಕೊಟ್ವಿ. ಇದೆಲ್ಲ ಜಾತಿ, ಧರ್ಮ ನೋಡಿ ಕೊಟ್ಟಿದ್ದಲ್ಲ ಬದಲಾಗಿ, ಈ ದೇಶದ ಜನರಿಗೋಸ್ಕರ ನಾವು ಫ್ರೀ ಅಕ್ಕಿ ಕೊಟ್ಟಿದ್ದೀವಿ ಅಂತಾ ಡಿಕೆಶಿ ತಮ್ಮ ಪಕ್ಷವನ್ನ ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೇ, ನೀವು ನಮ್ಮ ತಪ್ಪುಗಳನ್ನು ಕಂಡುಹಿಡಿದು ನಮ್ಮನ್ನು ಬೈಯ್ಯಿರಿ ನಮಗೇನು ಬೇಜಾರಿಲ್ಲ. ನೀವು ಹೀಗೆ ಮಾಡಬೇಕು, ಯಾವ ಕೆಲಸ ಪೆಂಡಿಂಗ್ ಇದೆ ಆ ಕೆಲಸ ಮಾಡಬೇಕು ಅನ್ನೋ ಸಲಹೆ ಕೊಡಿ. ನೀವು ನನಗೆ, ಸಿದ್ದರಾಮಯ್ಯಗೆ, ಅಂಜಲಿ ನಿಂಬಾಳ್ಕರ್‌ಗೆ, ಉಮಾಶ್ರೀ ಸೇರಿ ಯಾರ ತಪ್ಪಿದ್ದರೂ ಬೈದು ಸಲಹೆ ಕೊಡಿ ಅಂತಾ ಡಿಕೆಶಿ ಹೇಳಿದ್ದಾರೆ.
ಅಲ್ಲದೇ ನಾವು ನೀವೆಲ್ಲ ಸೇರಿ ಈ ರಾಜ್ಯದಲ್ಲಿ ಒಂದು ಬದಲಾವಣೆ ತರೋಣ ಎಂದಿರುವ ಡಿಕೆಶಿ, ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತೆಯರನ್ನು ಕುರಿತು, ನೀವೆಲ್ಲ ನಾಯಕಿಯರು. ಆ ನಾಯಕಿಯರಿಗೆ ಶಕ್ತಿ ಕೊಡಬೇಕು ಅನ್ನೋದು ನನ್ನ ಚಿಂತನೆ, ನನ್ನ ಕಲ್ಪನೆ, ನನ್ನ ಆಚಾರ, ನನ್ನ ವಿಚಾರ ಎಂದರು. ಅಲ್ಲದೇ ಕಾಂಗ್ರೆಸ್ ಈ ದೇಶದಲ್ಲಿ ಎಂಥ ಬದಲಾವಣೆ ತರಬೇಕೆಂದು ನೀವು ಬಯಸುತ್ತೀರಿ ಎಂದು ಹೇಳಿ, ನಾವು ಅದೇ ರೀತಿ ಕೆಲಸ ಮಾಡುತ್ತೇವೆಂದು ಡಿಕೆಶಿ ಭರವಸೆ ನೀಡಿದ್ದಾರೆ.

