ಆರೆಗನ್ (ಯುಎಸ್ಎ): ಇಂದಿನಿಂದ ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಜು.24ರವರೆಗೆ ನಡೆಯಲಿದೆ. ಭಾರತ ಸೇರಿ 200 ರಾಷ್ಟ್ರಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ.
ಈ ಬಾರಿಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕದ ಮೇಲೆ ಕಣ್ಣಿಟ್ಟಿದೆ. 2003ರಲ್ಲಿ ಅಂದು ಅಥ್ಲೀಟ್ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.ನಂತರ ಭಾರತ ಪದಕ ಗೆದ್ದಿರಲಿಲ್ಲ.
ಈ ಬಾರಿ ಟೊಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿ 22 ಅಥ್ಲೀಟ್ಗಳು ಭಾಗವಹಿಸುತ್ತಿದ್ದಾರೆ. ನೀರಜ್ ಚೋಪ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಇತ್ತಿಚೆಗಷ್ಟೆ ನೀರಜ್ ಚೋಪ್ರಾ ಪಾವೊ ನುರ್ಮಿ ಕ್ರೀಡಾಕೂಟ ಮತ್ತು ಡೈಮಂಡ್ ಲೀಗ್ ಹಾಗೂ ಸ್ಟೊಕೊಮ್ ಕೂಟಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ನೀರಜ್ ಜಾವೆಲಿನ್ನಲ್ಲಿ 89.94 ಮೀ. ದೂರ ಎಸೆದಿದ್ದು ಅತ್ಯುತ್ತಮ ವೈಯಕ್ತಿಕ ಪ್ರದರ್ಶನವಾಗಿತ್ತು. ಇದೀಗ ನೀರಜ್ 90 ಮೀ.ದೂರ ಎಸೆಯುವ ಗುರಿ ಹೊಂದಿದ್ದಾರೆ.
ಇವರ ಕಠಿಣ ಸ್ಪರ್ಧೆ ನೀಡುತ್ತಿದ್ದ ಜೊಹನ್ನಸ್ ವೆಟ್ಟರ್ ಗಾಯದ ಸಮಸ್ಯೆಯಿಂದಾಗಿ ಹೊರ ನಡೆದಿದ್ದರಿಂದ ನೀರಜ್ ಚೋಪ್ರಾಗೆ ಚಿನ್ನ ಗೆಲ್ಲುವ ಅವಕಾಶವಿದೆ.
ನೀರಜ್ ಚೋಪ್ರಾ ಹೊರತುಪಡಿಸಿ, ಡೈಮಂಡ್ ಲೀಗ್ನ 3 ಸಾವಿರ ಸ್ಟೀಪಲ್ ಚೇಸ್ ಕೂಟದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದ ಅವಿನಾಶ್ ಸೇಬ್ಲ್ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.
ಉಳಿದಂತೆ ಶಾಟ್ ಪುಟ್ ಅಥ್ಲೀಟ್ ತಾಜಿಂದರ್ಪಾಲ್, ಜಾವಲಿನ್ ಅಥ್ಲೀಟ್ ಅನು ರಾಣಿ ಮತ್ತು ಲಾಂಗ್ ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಭರವಸೆ ಮೂಡಿಸುವ ಅಥ್ಲೀಟ್ ಆಗಿದ್ದಾರೆ.