ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟಿಗೆ ಕಾರಣರಾದ ಅತೃಪ್ತರಿಗೆ ಪಾಠ ಕಲಿಸಲು ದೋಸ್ತಿ ಮುಂದಾಗಿದ್ದು ಇದೀಗ ಎಲ್ಲಾ 16 ಮಂದಿ ಶಾಸಕರ ಅನರ್ಹತೆ ಕೋರಿ ಸ್ಪೀಕರ್ ರಮೇಶ್ ಕುಮಾರ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅತೃಪ್ತ ಶಾಸಕರು ಸುಪ್ರೀಂ ನೀಡಿರೋ ಸೂಚನೆಯಂತೆ ಮುಂಬೈನಿಂದ ಬೆಂಗಳೂರಿಗೆ ಸ್ಪೀಕರ್ ಭೇಟಿಯಾಗಲು ತೆರಳುತ್ತಿದ್ದಂತೆ ದೋಸ್ತಿಗಳು ಇದೀಗ ಅವರಿಗೆ ಮತ್ತೊಂದು ಶಾಕ್ ನೀಡಿದೆ. ಹೌದು, ರಾಜೀನಾಮೆ ನೀಡಿ ಸರ್ಕಾರವನ್ನು ಪತನದಂಚಿಗೆ ದೂಡಿರುವ 16 ಮಂದಿ ಶಾಸಕರ ಅನರ್ಹತೆ ಕೋರಿ ದೋಸ್ತಿಗಳು ಸ್ಪೀಕರ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಸ್ಪೀಕರ್ ಎದುರು ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ ವಾದ ಮಂಡಿಸಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಜೀನಾಮೆ ನೀಡಿರುವ ಶಾಸಕರ ಸದಸ್ಯತ್ವ ರದ್ದುಗೊಳಿಸಿ ಅಂತ ಹೇಳಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಸ್ಪೀಕರ್ ರಮೇಶ್ ಕುಮಾರ್,ಶಾಸಕರನ್ನು ಮತ್ತೊಮ್ಮೆ ಕರೆಸಿ ಮಾತನಾಡುವುದಾಗಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ. ದೋಸ್ತಿಗಳಿಗೆ ಪಾಠ ಕಲಿಸಬೇಕೆಂದು ಒಂದು ವಾರದಿಂದ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಅತೃಪ್ತರಿಗೇ ತಕ್ಕ ಪಾಠ ಕಲಿಸೋಕೆ ದೋಸ್ತಿಗಳು ಸಜ್ಜಾಗಿದ್ದಾರೆ. ಇನ್ನು ಚೆಂಡು ಸ್ಪೀಕರ್ ರಮೇಶ್ ಕುಮಾರ್ ಅಂಗಳದಲ್ಲಿದ್ದು, ಒಂದು ವೇಳೆ ಅತೃಪ್ತರನ್ನು ಅನರ್ಹಗೊಳಿಸಿದ್ರೆ ಮರು ಆಯ್ಕೆಯಾಗುವವರೆಗೂ ಮತ್ತೆ ಸಚಿವರಾಗುವ ಅವಕಾಶ ಕಳೆದುಕೊಳ್ಳಲಿದ್ದಾರೆ.