ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತು ಬಿಜೆಪಿ ಪಟ್ಟು ಹಿಡಿದು ಕುಳಿತಿದ್ರೆ, ಮತ್ತೊಂದೆಡೆ ದೋಸ್ತಿಗಳು ಸಂಖ್ಯಾಬಲದಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ನಿನ್ನೆಯ ವಿಶ್ವಾಸಮತ ಯಾಚನೆಯನ್ನು ಉಪಾಯವಾಗಿ ಮುಂದೂಡಿಕೆ ಮಾಡಿಸುವಲ್ಲಿ ಯಶಸ್ವಿಯಾಗಿರೋ ದೋಸ್ತಿ ಮತ್ತೆ ಅತೃಪ್ತರನ್ನು ಸಮಾಧಾನ ಪಡಿಸೋ ಕೆಲಸ ನಡೆಸುತ್ತಿದೆ.
ವಿಧಾನಸಭಾ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ, ರಾಜ್ಯಪಾಲರು ಮಾರ್ಗರ್ಶನ ನೀಡಿರೋದು ಬಹಳ ಸಂತೋಷ, ಅವರಿಗೆ ನಾವು ಗೌರವ ನೀಡಲೇಬೇಕು. ಆದ್ರೆ ಸುಪ್ರೀಂಕೋರ್ಟ್ ಈ ಹಿಂದೆ ಸಂಪುಟಕ್ಕೆ ಯಾವುದೇ ರೀತಿಯ ಸೂಚನೆ ನೀಡಬಾರದೆಂಬ ಆದೇಶ ನೀಡಿದೆ. ನಾವೀಗಾಗಲೇ ವಿಶ್ವಾಸಮತ ಯಾಚನೆ ಕುರಿತು ಮಂಡನೆ ಮಾಡಿದ್ದೇವೆ. ಆದರೆ ವಿಶ್ವಾಸಮತ ಯಾಚನೆಗೂ ಮುನ್ನ ನಮ್ಮ ಮೇಲಿರುವ ಆರೋಪಗಳನ್ನು ರಾಜ್ಯದ ಜನರಿಗೆ ತಿಳಿಸಬೇಕಿದೆ. ಇದನ್ನು ಸಹಿಸಲಾರದೆ ಬಿಜೆಪಿಯವರು ತಾಳ್ಮೆ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯಪಾಲರು 15 ಶಾಸಕರು ಬೆಂಬಲ ವಾಪಸ್ ಪಡೆದಿದ್ದಾರೆ ಅಂತ ತಿಳಿಸಿದ್ದಾರೆ. ಆದರೆ ಅವರೆಲ್ಲರೂ ಇನ್ನೂ ಕಾಂಗ್ರೆಸ್ ನಲ್ಲೇ ಇದ್ದೇವೆ ಅಂತ ಹೇಳಿಕೊಂಡಿದ್ದಾರೆ. ಹಾಗೆಯೇ ಅವರಿನ್ನೂ ಯಾವುದೇ ಬೇರೆ ಪಕ್ಷ ಸೇರ್ಪಡೆಗೊಂಡಿಲ್ಲ. ಹೀಗಾಗಿ ಅವರೆಲ್ಲರೂ ಬೆಂಬಲ ವಾಪಸ್ ಪಡೆದಿರೋದಾಗಿ ಬರೆದುಕೊಟ್ಟಿರೋದನ್ನು ನಮಗೆ ರಾಜ್ಯಪಾಲರು ತೋರಿಸಬೇಕು ಅಂತ ಶಿವಕುಮಾರ್ ಹೇಳಿದ್ರು.
ಇನ್ನು ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ನಿರ್ನಾಮ ಮಾಡೋದಕ್ಕೆ ಬಿಜೆಪಿಯವರು ದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ. ರಾಜ್ಯಪಾಲರು ಬರೆದುಕೊಟ್ಟಿರೋ ಪತ್ರವೇ ನಿಮ್ಮ ಅನರ್ಹತೆಗೆ ಮೂಲವಾಗುತ್ತದೆ. ವಿಪ್ ಉಲ್ಲಂಘನೆ ಕುರಿತಾಗಿ ನಿಮಗೆ ಆಗುವ ಶಿಕ್ಷೆಯಿಂದ ನಿಮ್ಮನ್ನು ಯಾವ ಕೋರ್ಟೂ ರಕ್ಷಣೆ ಮಾಡಲಾಗುವುದಿಲ್ಲ. ಹೀಗಾಗಿ ನೀವು ಯಾವುದೇ ಕಾರಣಕ್ಕೂ ಯಾಮಾರಲು ಹೋಗಬೇಡಿ ಅಂತ ಮಾಧ್ಯಮದ ಮೂಲಕ ಸಚಿವ ಡಿಕೆಶಿ ಅತೃಪ್ತ ಶಾಸಕರಿಗೆ ಇದೇ ವೇಳೆ ಮನವಿ ಮಾಡಿದ್ರು.