ಟೀಮ್ ಇಂಡಿಯಾ ಮಾಜಿ ಆಟಗಾರ, ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡುಲ್ಕರ್, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಆಲನ್ ಡೋನಾಲ್ಡ್ ಮತ್ತು ಆಸ್ಟ್ರೇಲಿಯಾ ಮಾಜಿ ಮಹಿಳಾ ಕ್ರಿಕೆಟರ್ ಕ್ಯಾಥರಿನ್ ರಿಟ್ಜ್ ಪ್ಯಾಟ್ರಿಕ್ ಗೆ ಐಸಿಸಿ ಆಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮೂಲಕ ಸಚಿನ್ ಐಸಿಸಿ ಗೌರವಕ್ಕೆ ಪಾತ್ರರಾದ ಭಾರತದ ಆರನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಭಾರತದ ಅನಿಲ್ ಕುಂಬ್ಳೆ, ಸುನೀಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್ ಮತ್ತು ರಾಹುಲ್ ದ್ರಾವಿಡ್ ಈ ಗೌರವಕ್ಕೆ ಪಾತ್ರರಾಗಿದ್ದರು. ಸರಿಸುಮಾರು ಎರಡುವರೆ ದಶಕಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿದ್ದ ಲಿಟಲ್ ಮಾಸ್ಟರ್, ಗಾಡ್ ಆಫ್ ಕ್ರಿಕೆಟ್ ಎಂದೇ ಫೇಮಸ್ ಆಗಿದ್ದಾರೆ. ಕ್ರಿಕೆಟ್ ಗೆ ನೀಡಿರುವ ಅದ್ವಿತೀಯ ಕೊಡುಗೆ ಗೌರವಿಸಿರುವ ಐಸಿಸಿ, ತೆಂಡುಲ್ಕರ್ ಗೆ ಶ್ರೇಷ್ಠ ಗೌರವಾದ ಆಲ್ ಆಫ್ ಫೇಮ್ ನೀಡಿದೆ.
ಕ್ರಿಕೆಟ್ ಲೋಕದಲ್ಲಿ ಶತಕಗಳ ಶತಕ ಸಿಡಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು ಮೂರು ಮಾದರಿಯಿಂದ 664 ಪಂದ್ಯಗಳನ್ನಾಡಿರುವ ಸಚಿನ್, ದಾಖಲೆಯ 34357 ರನ್ ಗಳಿಸಿದ್ದಾರೆ. ಈ ಮೂಲಕ ಹತ್ತಾರು ಗೌರವ ಪಡೆದಿರುವ ತೆಂಡುಲ್ಕರ್ ಮುಡಿಗೆ ಐಸಿಸಿ ಆಲ್ ಆಫ್ ಫೇಮ್ ಗರಿಯೂ ಸೇರಿದೆ.
ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ