ಕೋಲಾರ: ಬೆಳೆಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯ ಮೊದಲನೆಯ ಬೃಹತ್ ಸಮಾವೇಶ ರದ್ದಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಇಂದು ಬೃಹತ್ ಸಮಾವೇಶ ಆಯೋಜನೆ ಮಾಡಿದ್ದರು. ಆದರೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಪಂಚರತ್ನ ರಥಯಾತ್ರೆ ಮತ್ತು ಗ್ರಾಮ ವಾಸ್ತವ್ಯವನ್ನು ಇಂದಿನಿಂದ ಐದು ದಿನಗಳ ಕಾಲ ಮುಂದೂಡಲಾಗಿದೆ.
ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ:
2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಐತಿಹಾಸಿಕ ಪಂಚರತ್ನ ರಥಯಾತ್ರೆಗೆ ಕೋಲಾರ ಜಿಲ್ಲೆಯ ಮುಳಬಾಗಿಲಿನ ಕುರುಡಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದರು.
ಐದು ದಿನಗಳ ಕಾಲ ಪಂಚರತ್ನ ಯಾತ್ರೆ, ಗ್ರಾಮ ವಾಸ್ತವ್ಯ ಮುಂದೂಡಿಕೆ:
ಬೆಳಗ್ಗೆಯಿಂದ ಮಳೆ ಬೀಳುತ್ತಿರುವ ಕಾರಣ ಇಂದಿನಿಂದ ಐದು ದಿನಗಳ ಕಾಲ ಪಂಚರತ್ನ ರಥಯಾತ್ರೆ ಮತ್ತು ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ. ಸಮಾವೇಶಕ್ಕೆ ಬಂದವರು ಮಳೆಯಲ್ಲೇ ನೆನೆದಿದ್ದಾರೆ. ಅಲ್ಲದೆ ಸಮಾವೇಶಕ್ಕೆ ಹಾಕಲಾಗಿದ್ದ ಬ್ಯಾನರ್ ಗಳನ್ನೇ ಕಿತ್ತುಕೊಂಡು ಮಳೆಗೆ ಆಸರೆಯಾಗಿ ಕಾರ್ಯಕರ್ತರು ಇಟ್ಟುಕೊಂಡಿದ್ದಾರೆ. ನಂತರ ಸಮಾವೇಶ ರದ್ದಾದ ಮಾಹಿತಿ ತಿಳಿಯುತ್ತಿದ್ದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾರ್ಯಕರ್ತರು ಬಸ್ ಹತ್ತಿ ಊರಿನತ್ತ ಪ್ರಯಾಣಿಸಿದ್ದಾರೆ.
ಬ್ಯಾನರ್ ಗಳನ್ನೇ ಕಿತ್ತುಕೊಂಡ ಮಳೆಗೆ ಆಸರೆಯನ್ನಾಗಿಸಿಕೊಂಡ ಕಾರ್ಯಕರ್ತರು:
ಇಂದು ಮಧ್ಯಾಹ್ನ ಮುಳಬಾಗಿಲಿನ ಬೈಪಾಸ್ ಬಳಿ ಸುಮಾರು 32 ಎಕರೆ ಜಮೀನಿನಲ್ಲಿ ಸಮಾವೇಶಕ್ಕೆ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿತ್ತು. ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಸುಮಾರು 3500 ಬಸ್ ಗಳಿಂದ ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದರು. ಸುಮಾರು 2 ಲಕ್ಷ ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನು 1 ಲಕ್ಷ 25 ಸಾವಿರ ಆಸನಗಳ ವ್ಯವಸ್ಥೆ, 8 ಕಡೆಗಳಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ, 25 ಕಡೆ ಊಟದ ಕೌಂಟರ್ ಗಳನ್ನು ಸಹ ತೆರೆಯಲಾಗಿತ್ತು.
ಮಾಜಿ ಸಿಎಂ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ಮಾಜಿ ಸಚಿವರು, ಹಲವು ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳೂ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಆದರೆ ಒಂದೇ ಸಮನೆ ಮಳೆ ಸುರಿಯುತ್ತಿರುವ ಕಾರಣ ಕಾರ್ಯಕ್ರಮವನ್ನು ಐದು ದಿನಗಳ ಕಾಲ ಮುಂದೂಡಲಾಗಿದೆ.