ಚಿಕ್ಕಮಗಳೂರು: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಅಂತ್ಯಸಂಸ್ಕಾರ ಬಂಧು-ಬಳಗ, ಗಣ್ಯರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು. ಈ ಮೂಲಕ ಸಾವಿರಾರು ಮಂದಿಯ ಬಾಳಲ್ಲಿ ಬೆಳಕು ತಂದಿದ್ದ ಉದ್ಯಮಿ ಸಿದ್ಧಾರ್ಥ್ ಪಂಚಭೂತಗಳಲ್ಲಿ ಲೀನರಾದ್ರು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಗ್ರಾಮದ ಚೇತನಹಳ್ಳಿ ಎಸ್ಟೇಟ್ ನಲ್ಲಿ ಉದ್ಯಮಿ ಸಿದ್ಧಾರ್ಥ್ ಅಂತ್ಯಕ್ರಿಯೆ ನೆರವೇರಿತು. ತಂದೆಯ ಚಿತೆಗೆ ಹಿರಿಯ ಪುತ್ರ ಅಮರ್ತ್ಯ ಸಿದ್ಧಾರ್ಥ್ ಅಗ್ನಿಸ್ಪರ್ಶ ಮಾಡಿದ್ರು, ಕಿರಿಯ ಪುತ್ರ ಇಶಾನ್ ಕೂಡ ಅಣ್ಣನೊಂದಿಗೆ ಕೈಜೋಡಿಸಿದ್ರು. ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆಗೆ ಚಿತೆಯನ್ನು ಶ್ರೀಗಂಧ, ಮಾವು, ಹಲಸು, ಗರಿಕೆ ಸೇರಿದಂತೆ ಸಿದ್ಧಾರ್ಥ್ ರವರ ಎಸ್ಟೇಟ್ ನಲ್ಲೇ ಬೆಳೆದ ನಾನಾ ಮರಗಳಿಂದ ಸಿದ್ಧಪಡಿಸಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಅಪಾರ ಸಂಖ್ಯೆಯ ಜನರು ಸಿದ್ಧಾರ್ಥ್ ಸ್ಥಿತಿಗೆ ಮರುಗಿ, ಕಂಬನಿ ಮಿಡಿದರು. ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪಂಚಭೂತಗಳಲ್ಲಿ ಸರಳ ಸಜ್ಜನ, ಸ್ನೇಹ ಜೀವಿ ವಿ.ಜಿ ಸಿದ್ಧಾರ್ಥ್ ಪಂಚಭೂತಗಳಲ್ಲಿ ಲೀನವಾಗಿ ಬಾರದ ಲೋಕಕ್ಕೆ ಪಯಣಿಸಿದ್ರು.