ಬೆಳಗಾವಿ: ಮಹಾರಾಷ್ಟ್ರದಾದ್ಯಂತ ಸುರಿಯುತ್ತಿರೋ ಭಾರಿ ಮಳೆಯಿಂದಾಗಿ ಅಲ್ಲಿನ ಅಣೆಕಟ್ಟೆಗಳು ತುಂಬಿದ್ದು, ಹೆಚ್ಚುವರಿ ನೀರನ್ನು ರಾಜ್ಯಕ್ಕೆ ಹರಿಬಿಡಲಾಗ್ತಿದ್ದು ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಗ್ರಾಮವೊಂದು ನಡುಗಡ್ಡೆಯಾಗಿದ್ದು ಇನ್ನೂ ಹಲವು ಗ್ರಾಮಗಳು ಪ್ರವಾಹ ಭೀತಿಯಲ್ಲಿವೆ.
ಮಹಾರಾಷ್ಟ್ರದಲ್ಲಿ ದಿನನಿತ್ಯ ಸುರಿಯುತ್ತಿರೋ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಣೆಕಟ್ಟುಗಳು ತುಂಬಿಹೋಗಿವೆ. ಕೊಲ್ಲಾಪುರದ ಪಂಚಗಂಗಾ ನದಿ, ದೂದ್ ಗಂಗಾ ಉಕ್ಕಿ ಹರಿಯುತ್ತಿದ್ದು ಎಲ್ಲೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರನ್ನು ಇದೀಗ ಕರ್ನಾಟಕದ ಕೃಷ್ಣಾ ನದಿಗೆ ಹರಿಬಿಡಲಾಗ್ತಿದ್ದು, ರಾಜ್ಯದಲ್ಲೂ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣ ಹಿನ್ನೀರು ಪ್ರದೇಶದಲ್ಲಿರುವ ಇಂಗಳಿ ಗ್ರಾಮ ಸಂಪೂರ್ಣ ನಡುಗಡ್ಡೆಯಾಗಿ ಮಾರ್ಪಟ್ಟಿದ್ದು ಜನರು ನೀರಿನಲ್ಲಿ ಈಜಿ ಸುರಕ್ಷಿತ ಸ್ಥಳ ತಲುಪುತ್ತಿದ್ದಾರೆ. ಗ್ರಾಮದಲ್ಲಿ ವಾಸವಿರುವ 50ಕ್ಕೂ ಹೆಚ್ಚು ಕುಟುಂಬಗಳಿಗೆ ಕೇವಲ 2 ಬೋಟ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಒದಗಿಸಿದ್ದು, ಬೋಟ್ ಅವಲಂಬಿಸಿಯೇ ಜನರು ಕಾಲ ಕಳೆಯಬೇಕಿದೆ. ಈ ಮಧ್ಯೆ ಇದೇ ಗ್ರಾಮದಲ್ಲಿ ವ್ಯಕ್ತಿಯೋರ್ವ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿಹೋಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಇನ್ನು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು ಜನರು ಪರದಾಡುತ್ತಿದ್ದಾರೆ. ಲಿಂಗಸೂಗೂರು-ಶೀಲಹಳ್ಳಿ ಸೇತುವೆ ಪ್ರವಾಹದಿಂದ ಮುಳುಗಡೆಯಾಗಿದ್ದು ಸುಮಾರು 5 ಗ್ರಾಮಗಳ ಜನರು ರಸ್ತೆ ಸಂಪರ್ಕ ಕಡಿತದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.