International News
ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ಭೂಕಂಪನದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿ ಹಲವಾರು ಜನ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಇವತ್ತೂ ಕೂಡ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಎರಡು ದಶಕಗಳಲ್ಲಿಯೇ ಸಾವಿಗೀಡಾದವರ ಸಂಖ್ಯೆ 16,000 ಆಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,873 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 3,162 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಭೂಕಂಪನದಿಂದಾಗಿ ನೆಲಕಚ್ಚಿರುವ ಸಹಸ್ರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜರನ್ನು ರಕ್ಷಣಾ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ರಕ್ಷಿಸಲು ಟರ್ಕಿಯಲ್ಲಿ ಅತೀವ ಪ್ರಯತ್ನ ಮುಂದುರೆಸಿದ್ದಾರೆ. ಆದರೆ, ಇಂತಹ ಸಿಬ್ಬಂದಿ ಸಂಖ್ಯೆ ಕೇವಲ 60 ಸಾವಿರದಷ್ಟಿದೆ. ಭೂಕಂಪದಿಂದ ಹಾನಿಗೆ ಒಳಗಾದ ಪ್ರದೇಶಗಳು ಅಪಾರವಾಗಿರುವುದರಿಂದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರು ನೆರವಿಗಾಗಿ ಮೊರೆ ಇಡುತ್ತಿದ್ದಾರೆ.
ಟರ್ಕಿಯಲ್ಲಿ 8.5 ಕೋಟಿ ಜನಸಂಖ್ಯೆ ಇದ್ದು, ಆ ಪೈಕಿ 1.3 ಕೋಟಿ ಜನರು ಭೂಕಂಪನದಿಂದ ಬಾಧಿತರಾಗಿದ್ದಾರೆ. 10 ಪ್ರಾಂತ್ಯಗಳಲ್ಲಿ ಟರ್ಕಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸದ್ಯ 3.8 ಲಕ್ಷ ಜನರು ಮಾತ್ರ ಸರ್ಕಾರಿ ನಿರಾಶ್ರಿತ ಕೇಂದ್ರ ಅಥವಾ ಹೋಟೆಲ್ ಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.