ಐತಿಹಾಸಿಕ ಬೇಲೂರು ಶ್ರೀಚೆನ್ನಕೇಶವಸ್ವಾಮಿ ರಥೋತ್ಸವ ಸಾಂಗವಾಗಿ ನಡೆದಿದ್ದು, ದೇವಾಲಯದ ಮೇಟ್ಟಿಲ ಮೇಲೆ ವಂದನೆ ಸಲ್ಲಿಸಲು ಇಸ್ಲಾಂ ಧರ್ಮೀಯರಿಗೆ ಅವಕಾಶ ಕೊಡಲಾಗಿತ್ತು. ಈ ವೇಳೆ ಖಾಜಿ ವಂಶಸ್ಥರು ಶ್ಲೋಕ ಪಠಣೆ ಮಾಡಿದರು. ಆದರೆ ಇದು ಕುರಾನ್ ಓದಿದ್ದು, ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಇದಕ್ಕೆ ಅವಕಾಶ ಕೊಟ್ಟಿದ್ದಕ್ಕೆ, ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದರು. ಶ್ಲೋಕ ಪಠಣೆಯ ವೇಳೆ ಜೈ ಶ್ರೀರಾಮ್ ಎಂಬ ಘೋಷಣೆಯನ್ನ ಕೂಡ ಕೂಗಲಾಯಿತು.
ಇನ್ನು ಈ ಬಗ್ಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣ ಸ್ವಾಮಿ ಸ್‌ಪಷ್ಟನೆ ನೀಡಿದ್ದು, ಖಾಜಿಯವರು ಖುರಾನ್ ಪಠಣ ಮಾಡಿಲ್ಲ ಕೇವಲ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಯಾವುದೇ ಗೊಂದಲ ಆಗಿಲ್ಲ. ಅವರು ಬಂದು ರಥದ ಸಮೀಪ ಇರೋ ಬಾವಿ ಎದುರು ದೇವರಿಗೆ ನಮಿಸಿ ಪ್ರಾರ್ಥನೆ ಮಾಡಿದ್ದಾರೆ. ಅವರು ಪ್ರಾರ್ಥನೆ ಮಾಡಿದ್ದಕ್ಕೆ ದೇವಾಲಯದಿಂದ ಗೌರವ ಸಮರ್ಪಣೆ ಮಾಡಲಾಗಿದೆ. ತಾನು ಖುರಾನ್ ಪಠಣ ಮಾಡಿಲ್ಲ. ಪ್ರಾರ್ಥನೆ ಮಾಡಿ ಗೌರವ ಸ್ವೀಕಾರ ಮಾಡಿದ್ದೇನೆ ಎಂದು ಬರೆದು ಸಹಿಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಾನು ಕುರಾನ್ ಪಠಣ ಮಾಡಿಲ್ಲ ಎಂದು ಖಾಜಿ ವಂಶಸ್ಥರಾದ, ಸಜ್ಜದ್ ಬಾಷಾ ಖಾದ್ರಿ ಸಾಹೇಬ್ ಕೂಡ ಸ್ಪಷ್ಟನೆ ನೀಡಿದ್ದಾರೆ. ನಮ್ಮ ರೀತಿಯಂತೆ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಣೆ ಮಾಡಿದ್ದೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆಯನ್ನು ಸ್ವೀಕರಿಸುತ್ತೇನೆ. ಹಾಗೂ ಈ ದಿನ ನಾನು ಖುರಾನ್ ಪಠಣ ಮಾಡಿಲ್ಲ ಎಂದು ತಿಳಿಸ ಬಯಸುತ್ತೇನೆ. ರಥದ ಎದುರು ಮುಸ್ಲಿಂ ಧಾರ್ಮಿಕ ವಿಧಿಯಂತೆ ನಮಿಸಿದ್ದೇನೆ ಎಂದು ಪತ್ರ ಬರೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ರಥೋತ್ಸವ ಮಾತ್ರ ವಿಜೃಂಭಣೆಯಿಂದ ಜರುಗಿತು, ಭಕ್ತಾದಿಗಳು ಚೆನ್ನಕೇಶವನಿಗೆ ಜೈಕಾರ ಹಾಕುತ್ತ, ರಥಕ್ಕೆ ಹಣ್ಣು, ಹೂವು ಎಸೆದರು. ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದು, ತೇರನ್ನು ಎಳೆದು ಸಂತಸ ಪಟ್ಟರು.
ಚುನಾವಣಾ ಪ್ರಚಾರಕ್ಕೆ ಬಂದಿದ್ದ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು