ಕೋಲಾರ: ಬಿಜೆಪಿಯಿಂದ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ಹೂಡಿ ವಿಜಯ್ ಕುಮಾರ್ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಇಂದು ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮಾಲೂರಿನ ವೈಟ್ ಗಾರ್ಡನ್ ನಲ್ಲಿರುವ ಹೂಡಿ ವಿಜಯ್ ಕುಮಾರ್ ಅವರ ನಿವಾಸದಿಂದ ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ಮಾಲಕ ಮೆರವಣಿಗೆ ಆರಂಭಿಸಿ, ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರು. ಬಳಿಕ ಮಾರೆಮ್ಮನ ದೇವಸ್ಥಾನದಲ್ಲಿ ಹೂಡಿ ವಿಜಯ್ ಕುಮಾರ್ ದಂಪತಿ ಪೂಜೆ ಸಲ್ಲಿಸಿದರು. ಬಳಿಕ ಸಾವಿರಾರು ಬೆಂಬಲಿಗರ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಪತ್ನಿ ಜೊತೆ ಹೂಡಿ ವಿಜಯ್ ಕುಮಾರ್ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ರೋಡ್ ಶೋನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಬೆಂಬಲಿಗರು ಭಾಗಿಯಾಗಿದ್ದು, ಇದು ಹೂಡಿ ವಿಜಯ್ ಕುಮಾರ್ ದಂಪತಿ ಅವರ ಶಕ್ತಿ ಪ್ರದರ್ಶನವಾಗಿತ್ತು.
ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೂಡಿ ವಿಜಯ್ ಕುಮಾರ್ ಅವರು, ನನಗೆ ಬಿಜೆಪಿ ಪಕ್ಷದಲ್ಲಿ ನಿಜಕ್ಕೂ ಮೋಸವಾಗಿದೆ. ಮಾಲೂರು ಸ್ವಾಭಿಮಾನಕ್ಕಾಗಿ ಸ್ಪರ್ಧಿಸಬೇಕೆಂದು ಬೆಂಬಲಿಗರು ಸೂಚಿಸಿದ್ರು. ಅದರಂತೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಮಾಲೂರು ಜನರು ನನ್ನ ಕೈ ಬಿಡೋದಿಲ್ಲ ಎಂಬ ನಂಬಿಕೆ ಇದೆ. ಈ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡುತ್ತಾರೆ ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಮಾಧ್ಯಮದವರ ಜೊತೆ ಮಾತನಾಡುವ ವೇಳೆ ಹೂಡಿ ವಿಜಯ್ ಕುಮಾರ್ ಪತ್ನಿ ಶ್ವೇತಾ ಅವರು ಭಾವುಕರಾದರು.
ಒಬಿಸಿ ಜನಾಂಗ ಅನ್ನೋ ಕಾರಣಕ್ಕೆ ಟಿಕೆಟ್ ನೀಡಿಲ್ಲ. ಮಾಲೂರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜನಾಂಗದವರು ಪಕ್ಷಾತೀತವಾಗಿ ನಮಗೆ ಬೆಂಬಲಿಸುತ್ತಿದ್ದಾರೆ. ನನ್ನ ಸೇವೆಯನ್ನ ಮಾಲೂರು ಕ್ಷೇತ್ರದ ಜನತೆಗೆ ಮೀಸಲಿಡುತ್ತೇನೆ. ನಾಲ್ಕು ವರ್ಷ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನನಗೆ ಸಾಕಷ್ಟು ಬಾರಿ ಅವಮಾನ ಮಾಡಿದ್ರು, ಏನೇ ಅವಮಾನ ಮಾಡಿದ್ರು ಜಯ ಸಿಗತ್ತೆ ಅನ್ಕೊಂಡಿದ್ವಿ. ಆದ್ರೆ ಟಿಕೆಟ್ ನೀಡದೆ ಈ ರೀತಿಯಾಗಿ ಅವಮಾನ ಮಾಡುತ್ತಾರೆ ಅಂತ ಕನಸ್ಸಲ್ಲೂ ಅಂದುಕೊಂಡಿರಲಿಲ್ಲ ಎಂದು ಹೂಡಿ ವಿಜಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಹೂಡಿ ವಿಜಯ್ ಕುಮಾರ್ ತೊಡಗಿದ್ದರು. ಈ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಆದ್ರೆ ಮೂಲ ಬಿಜೆಪಿಗರನ್ನು ಕಡೆಗಣಿಸಿ ಪಕ್ಷಕ್ಕೆ ಹೊಸದಾಗಿ ಬಂದ ಮಂಜುನಾಥ್ ಗೌಡಗೆ ಟಿಕೆಟ್ ಕೊಟ್ಟ ಹಿನ್ನೆಲೆಯಲ್ಲಿ ಬೇಸತ್ತು ಹೂಡಿ ವಿಜಯ್ ಕುಮಾರ್ ಹಾದಿಯಾಗಿ ಹಲವಾರು ಮಂದಿ ಬಿಜೆಪಿಗೆ ರಾಜೀನಾಮೆ ನೀಡಿದ್ದರು.
ಜೆಡಿಎಸ್ ಭರವಸೆಗಳ ಪತ್ರ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು