ಬೆಂಗಳೂರು: ನೃತ್ಯ ಕಲಾವಿದೆ, ನೃತ್ಯ ಶಿಕ್ಷಕಿ, ನೃತ್ಯ ಸಂಯೋಜಕಿಯಾಗಿ ಎರಡು ದಶಕಗಳಿಂದ ನೃತ್ಯಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ವಿಧೂಷಿ ಕಲಾವತಿ ಜಿ.ಎಸ್ ರವರು ಭರತನಾಟ್ಯ ವಿಭಾಗದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಪ್ರಾಯೋಜಿಸುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ನೃತ್ಯ ಕಲೆಯತ್ತ ಆಕರ್ಷಿತರಾದ ಕಲಾವತಿಯವರು ನೃತ್ಯವೇ ಜೀವ, ನೃತ್ಯವೇ ಜೀವನ ಎಂದು ಬದುಕುತ್ತಿದ್ದಾರೆ. ಅಂತರ್ರಾಷ್ಟ್ರೀಯ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕಾಯಕ ಮಾಡುತ್ತಲೇ ತಮ್ಮ ನಾಟ್ಯಕಲಾ ಸಾಂಸ್ಕೃತಿಕ ಕೇಂದ್ರ ದ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಭರತನಾಟ್ಯದಲ್ಲಿ ವೃತ್ತಿಪರ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ನೃತ್ಯ ಸಂಯೋಜನೆ ಮಾಡುವ ಜೊತೆಗೆ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಪ್ರತಿವರ್ಷ ನೃತ್ಯ ಸ್ಪರ್ಧೆ, ನೃತ್ಯೋತ್ಸವ ಹಾಗೂ ನೃತ್ಯ ಪುರಸ್ಕಾರ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ನೃತ್ಯ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೆಂಪೇಗೌಡ ಪ್ರಶಸ್ತಿ, ಚಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜವಾಹರಲಾಲ ಸದ್ಬಾವನಾ ರಾಷ್ಟ್ರ ಪ್ರಶಸ್ತಿ, ಭಾರತ್ ಭೂಷಣ್ ಪ್ರಶಸ್ತಿ, ಸುವರ್ಣ ಟಿವಿಯವರ ಮಹಿಳಾ ಸಾಧಕಿ ಪ್ರಶಸ್ತಿ.. ಹೀಗೆ ಹಲವಾರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮೇ 23 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2023 ನೇ ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಕಲಾವತಿಯವರಿಗೆ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಅಶ್ವತ್ಥನಾರಾಯಣ್
‘ರಕ್ತಾಕ್ಷ’ ಸಿನಿಮಾ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಬಿಸಿಲೂರಿನ ಪ್ರತಿಭೆ