Dharwad News: ಧಾರವಾಡ: ವಿಶ್ವವಿಖ್ಯಾತಿ ಸ್ಪಿನ್ ಬೌಲಿಂಗ್ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (muttiah muralitharan) ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚುಮೆಚ್ಚು. ಆದರೆ ಈ ಬೌಲರ್ ಓರ್ವ ಉದ್ಯಮಿ ಅನ್ನುವುದು ಬಹಳ ಜನರಿಗೆ ಗೊತ್ತಿಲ್ಲ. ಶ್ರೀಲಂಕಾದಲ್ಲಿ ಈಗಾಗಲೇ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿರುವ ಮುತ್ತಯ್ಯ ಮುರಲೀಧರನ್, ಇದೀಗ ಕರ್ನಾಟಕದಲ್ಲಿಯೂ ಉದ್ಯಮ ಸ್ಥಾಪನೆಗೆ ಮುಂದಾಗಿದ್ದಾರೆ. ಅದರಲ್ಲೂ ಧಾರವಾಡದಲ್ಲಿ ಉದ್ಯಮ ಸ್ಥಾಪಿಸಲು ಯೋಜನೆ ರೂಪಿಸಿರುವ ಅವರು, ಈಗಾಗಲೇ ಭೂಮಿಯನ್ನು ಕೂಡ ನೋಡಿಟ್ಟಿದ್ದಾರೆ.
ಎಲ್ಲವೂ ಯೋಜನೆ ಪ್ರಕಾರ ನಡೆದರೆ, ಮೂರು ತಿಂಗಳಲ್ಲಿ ಉದ್ದೇಶಿತ ಕೈಗಾರಿಕೆ ಸ್ಥಾಪನೆಯ ಪ್ರಾಥಮಿಕ ಕಾರ್ಯಗಳು ಆರಂಭವಾಗುತ್ತವೆ. ಮೆ. ಸಿಲೋನ್ ಬಿವರೇಜ್ ಕ್ಯಾನ್ ಪ್ರೈವೆಟ್ ಲಿಮಿಟೆಡ್ ಶ್ರೀಲಂಕಾದ ಕಂಪನಿಯಾಗಿದ್ದು, ಮುತ್ತಯ್ಯ ಮುರಳೀಧರ್ ಇದರ ಪ್ರವರ್ತಕರು. ಈ ಸಂಸ್ಥೆ ಅಲ್ಯುಮಿನಿಯಂ ಕ್ಯಾನ್ ತಯಾರಿಕೆ ಮತ್ತು ಪಾನೀಯಗಳನ್ನು ತುಂಬುವ ಉದ್ದಿಮೆಯಾಗಿದ್ದು, ಧಾರವಾಡದ ಎಫ್ಎಂಸಿಜಿ ಕ್ಲಸ್ಟರ್ ನಲ್ಲಿ ತನ್ನ ಘಟಕ ಸ್ಥಾಪಿಸಲು ಅನುಮತಿ ಹಾಗೂ ಸ್ಥಳಾವಕಾಶ ಕೋರಿ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಹಿಂದಿನ ಬಿಜೆಪಿ ಸರ್ಕಾರ ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ 200 ಎಕರೆ ಪ್ರದೇಶವನ್ನು ಎಫ್ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್) ಕ್ಲಸ್ಟರ್ ಎಂದು ಘೋಷಿಸಿತ್ತು. ಈ ಪ್ರದೇಶದಲ್ಲಿ 26 ಎಕರೆ ಸ್ಥಳಾವಕಾಶ ನೀಡುವಂತೆ ಮುರುಳೀಧರನ್ ಕಂಪನಿ ರಾಜ್ಯ ಸರ್ಕಾರವನ್ನು ಕೋರಿತ್ತು. ಈ ಉದ್ದಿಮೆ ರೂ. 446 ಕೋಟಿ ಬಂಡವಾಳದ್ದಾಗಿದ್ದು, 500 ಜನರಿಗೆ ಉದ್ಯೋಗಾವಕಾಶ ನೀಡಲಿದೆ.
ರಾಜ್ಯ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ರಾಜ್ಯ ಮಟ್ಟದ ಭೂ ಆಡಿಟ್ ಸಮಿತಿ 2023ರ ಮಾರ್ಚ್ 4ರಂದು ನಡೆದ ಸಭೆಯಲ್ಲಿ ಕಂಪನಿಯ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಮಾ. 7ರಂದು ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸಮಿತಿ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಈ ಅನುಮೋದನೆಯಂತೆ ಕೆಐಎಡಿಬಿ ಮೆ. ಸಿಲೋನ್ ಬಿವರೇಜ್ ಕ್ಯಾನ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ 16.70 ಎಕರೆ ಭೂಮಿಯನ್ನು ಮುಮ್ಮಿಗಟ್ಟಿಯ ಕೈಗಾರಿಕಾ ಪ್ರದೇಶದ ಪ್ಲಾಟ್ ನಂ. 157ರಲ್ಲಿ, 2.64 ಎಕರೆ ಭೂಮಿಯನ್ನು ಪ್ಲಾಟ್ ನಂ. 156ರಲ್ಲಿ ಹಾಗೂ 6.15 ಎಕರೆ ಪ್ರದೇಶವನ್ನು ಪ್ಲಾಟ್ ನಂ. 158ರಲ್ಲಿ ಮಂಜೂರು ಮಾಡಿದೆ. ಜೊತೆಗೆ ಹೆಸ್ಕಾಂ 3000 ಕೆವಿ ವಿದ್ಯುತ್ ನ್ನು ಹಾಗೂ ಪ್ರತಿ ದಿನ 20 ಲಕ್ಷ ಲೀಟರ್ ನೀರನ್ನು ಕಂಪನಿಗೆ ಮಂಜೂರು ಮಾಡಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಮುತ್ತಯ್ಯ ಮುರಳೀಧರನ್ ಉದ್ದಿಮೆ ರಂಗಕ್ಕೆ ಕಾಲಿರಿಸಿದ್ದು, ಅವರ ಸಂಸ್ಥೆಯು ಎಂಟು ವಿವಿಧ ಗಾತ್ರಗಳ ನೀಳವಾದ, ಉತ್ತಮ ಗುಣಮಟ್ಟದ ವಿವಿಧ ಲೇಬಲ್ ಗಳ ಕ್ಯಾನ್ ಗಳನ್ನು ಉತ್ಪಾದಿಸುತ್ತಿದ್ದು, ಇವುಗಳಿಗೆ ವಿವಿಧ ದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಮುರಳೀಧರನ್ ಈಗಾಗಲೇ ಎರಡು ಬಾರಿ ಧಾರವಾಡಕ್ಕೆ ಬಂದು ಉದ್ದಿಮೆ ಸ್ಥಾಪನೆಯ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ಈ ಸಂಸ್ಥೆ ಮೂರು ಹಂತಗಳಲ್ಲಿ ತನ್ನ ಉದ್ದಿಮೆಯನ್ನು ವಿಸ್ತರಿಸಲಿದ್ದು, ಆರಂಭದ ಹಂತದಲ್ಲಿ 200 ಜನರಿಗೆ ಉದ್ಯೋಗ ದೊರೆಯಲಿದೆ.
ಧಾರವಾಡ ಜಿಲ್ಲೆ ಆಯಕಟ್ಟಿನ ಸ್ಥಾನದಲ್ಲಿದ್ದು, ಪ್ರಮುಖ ನಗರಗಳಾದ ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್ ಹಾಗೂ ಚೆನೈಗೆ ಉತ್ತಮ ಸಂಪರ್ಕವನ್ನು ರಸ್ತೆ, ರೈಲು, ವಿಮಾನಗಳ ಮೂಲಕ ಹೊಂದಿದೆ. ಧಾರವಾಡದ ಎಫ್ ಎಂ ಸಿಜಿ ಕ್ಲಸ್ಟರ್ ನಲ್ಲಿ ಉದ್ದಿಮೆ ಆಕರ್ಷಿಸಲು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆ.
ಸಂಸತ್‌ನಲ್ಲಿ ರಾಹುಲ್ ಗಾಂಧಿ ಕೊಟ್ಟ ಫ್ಲೈಯಿಂಗ್ ಕಿಸ್‌ಗೆ ಸ್ಮೃತಿ ಇರಾನಿ ಆಕ್ಷೇಪ: ಸ್ಪೀಕರ್‌ಗೆ ದೂರು
ನಿಮಗೆ ಪೆಟ್ಟಾಗಿಲ್ಲಾ ತಾನೇ..?: ಬೈಕ್ ಮೇಲಿಂದ ಬಿದ್ದ ವ್ಯಕ್ತಿಯನ್ನು ವಿಚಾರಿಸಿದ ರಾಹುಲ್ ಗಾಂಧಿ..
‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ಗೆ ಒಟ್ಟು 4 ಕೋಟಿ ರೂ. ನೀಡಿದ ಸಂಸ್ಥೆಗಳು..




