Friday, October 18, 2024

Latest Posts

ಪೊಲೀಸ್ ಹುತಾತ್ಮರ ದಿನಾಚರಣೆ: ಗಣ್ಯರಿಂದ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಣೆ

- Advertisement -

Hubballi News: ಹುಬ್ಬಳ್ಳಿ: ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಅವರ ತ್ಯಾಗವನ್ನು ನೆನೆಯಲಾಗುವುದು. ದಿನನಿತ್ಯದಲ್ಲಿ ಪೊಲೀಸರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ‌. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ನಗರದ ಕಾರವಾರ ರಸ್ತೆಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಆಯುಕ್ತಾಲಯ ಹುಬ್ಬಳ್ಳಿ ಧಾರವಾಡ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಿಸಿ, ಅವರು ಮಾತನಾಡಿದರು.

ಪೊಲೀಸರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ವಾಹನ ದಟ್ಟಣೆ, ಭಯೋತ್ಪಾದಕ ಕೃತ್ಯಗಳು, ಸೈಬರ್ ಅಪರಾಧ ಸೇರಿದಂತೆ ವಿವಿಧ ಅಪರಾಧಗಳನ್ನು ತಡೆಯುವಲ್ಲಿ ತಲ್ಲೀನರಾಗಿರುವರು. ನಾಗರೀಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಬಹುದು. ಪೊಲೀಸರ ಜವಾಬ್ದಾರಿಯನ್ನು ಅರಿತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಕೆ.ಸುಕುಮಾರ ಮಾತನಾಡಿ, 1959ರಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಎಸ್‌ಐ ಕರಂ ಸಿಂಗ್‌ ನೇತೃತ್ವದ ತಂಡ ಕೇವಲ ರೈಫಲ್‌ನೊಂದಿಗೆ ಲಡಾಖ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಪಡೆ ಭಾರತೀಯ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದಾಗ ವೀರಾವೇಷದಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದರು. ಇವರ ಪ್ರಾಣತ್ಯಾಗದ ನೆನಪಿನಲ್ಲಿ ರಾಷ್ಟ್ರಾದ್ಯಂತ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸರು ಪ್ರಾಣ ತ್ಯಾಗ ಮಾಡಿದ ಅಧಿಕಾರಿ, ಸಿಬ್ಬಂದಿಯನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಗುತ್ತದೆ. ಲಡಾಖ್ ನಲ್ಲಿ 16 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ. ಈ ವರ್ಷದಲ್ಲಿ ದೇಶದಲ್ಲಿ 189 ಪೊಲೀಸರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗಿದ್ದಾರೆ.
ಕರ್ನಾಟಕದಲ್ಲಿ 16 ಪೊಲೀಸರು ಕರ್ತವ್ಯದಲ್ಲಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇವರೆಲ್ಲರ ತ್ಯಾಗವನ್ನು ಸ್ಮರಿಸುವ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ ಎಂದರು.

ಗಣ್ಯ ಅತಿಥಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಪೊಲೀಸ್ ತುಕಡಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಗೌರವ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಆಂತರಿಕ ಭದ್ರತಾ ವಿಭಾಗದ ಐಜಿ ವಿಪುಲಕುಮಾರ, ಡಿಸಿಪಿಗಳಾದ ರವೀಶ್ ಸಿ.ಆರ್, ರಾಜೀವ್ ಎಂ., ಮಾಜಿ ಸಂಸದರಾದ ಐ.ಜಿ.ಸನದಿ, ಉದ್ಯಮಿಗಳಾದ ವಿ.ಎಸ್.ವಿ. ಪ್ರಸಾದ್, ಮಹೇಂದ್ರ ಸಿಂಘಿ, ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಕುಟುಂಬ ವರ್ಗದವರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಅಧ್ಯಾಪಕರ ವಿನಿಮಯ ಧಾರವಾಡದ IIT ಮತ್ತು ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ ನಡುವೆ ಒಡಂಬಡಿಕೆ

ದೋಷಯುಕ್ತ ಇವಿ ವಾಹನ ಹೊಸ ಬೈಕ್‌ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ

Market : ವರ್ಷವಾದರು ಹಂಚಿಕೆಯಾಗದ ಮಾರುಕಟ್ಟೆ ಮಳಿಗೆ : ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು

- Advertisement -

Latest Posts

Don't Miss