Political News: ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲುವು ಸಾಧಿಸಲು ಜಿಲ್ಲೆಗಳಲ್ಲಿ ಸಿದ್ಧತೆ, ಸಂಭವನೀಯ ಅಭ್ಯರ್ಥಿ ಗಳ ಆಯ್ಕೆ, ಪಕ್ಷಕ್ಕೆ ಬರಲು ಸಿದ್ಧವಿರುವವರ ಸೇರ್ಪಡೆಗೆ ಆದ್ಯತೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಶನಿವಾರ ನಡೆದ 15 ಸಚಿವರ ಉಪಹಾರ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಎಷ್ಟರ ಮಟ್ಟಿಗೆ ಸಿದ್ದತೆ ಆಗಿದೆ ಎಂಬುದನ್ನು ಪರಾಮಶಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲಾಯಿತು. ಅಭ್ಯರ್ಥಿಗಳ ಆಯ್ಕೆಗೆ 30 ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದು,ಸದ್ಯ 15 ಸಚಿವರೊಂದಿಗೆ ಸಭೆ ನಡೆಸಲಾಗಿದೆ. ಇನ್ನುಳಿದವರ ಜತೆ ಮುಂದಿನ ವಾರ ಸಭೆ ನಡೆಯಲಿದೆ. ಇಲ್ಲವೇ ಗುರುವಾರ ಕರೆದಿರುವ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿಯೇ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಪಕ್ಷದ ಹೈಕಮಾಂಡ್ ರಾಜ್ಯದಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಸಿಎಂ ಹಾಗೂ ಡಿಸಿಎಂ ಕಟ್ಟುನಿಟ್ಟಾಗಿ ಹೇಳಿದ್ದಾರೆ. ರಾಜ್ಯದಲ್ಲಿ 20ಸ್ಥಾನ ಗೆದ್ದೆ ಗೆಲ್ಲುತ್ತೇವೆ ಎಂದು ಹೈಕಮಾಂಡ್ಗೆ ನಾನು ಮತ್ತು ಶಿವಕುಮಾರ್ ಮಾತುಕೊಟ್ಟಿದ್ದೇವೆ. ನೀವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗಿದೆ. ಜಿಲ್ಲೆಗಳಲ್ಲಿ ಕನಿಷ್ಠ ವಾರಕ್ಕೆ 2ದಿನ ಇರಬೇಕು, ತಾಲೂಕುಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
15ರೊಳಗೆ ಸಂಭವನೀಯರ ಪಟ್ಟಿ: ಸಂಭವನೀಯ ಅಭ್ಯರ್ಥಿಗಳ ಆಯ್ಕೆಯನ್ನು ನ.15ರೊಳಗೆ ಪೂರ್ಣಗೊಳಿಸಬೇಕು. ನ.17ಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ರಾಜ್ಯಕ್ಕೆ ಬರುವವರಿದ್ದು, ಆ ಸಂದರ್ಭದಲ್ಲಿ ಚರ್ಚೆ ನಡೆಸಿ ಪಟ್ಟಿಯನ್ನು ಹೈಕಮಾಂಡ್ಗೆ ರವಾನೆ ಮಾಡಬೇಕು. ಪ್ರತಿ ಕ್ಷೇತ್ರಕ್ಕೂ 3 ಹೆಸರುಗಳಿರಬೇಕು ಎಂಬುದನ್ನು ಸೂಚಿಸಲಾಗಿದೆ. ಸಚಿವರು ವೀಕ್ಷಕರಾಗಿ ತೆರಳಿ ಸಲ್ಲಿಸಿರುವ ವರದಿ ಸಮರ್ಪಕವಾಗಿಲ್ಲ. ಮತ್ತೊಂದು ಸುತ್ತಿನ ಪ್ರವಾಸ ಹೋಗಿ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರು, ಪಡೆದ ಮತ, ಅವರಿಗೆ ಇರುವ ಬೆಂಬಲ ಕುರಿತು ಸ್ಥಳೀಯ ಮುಖಂಡರು ಮತ್ತು ಹಿರಿಯ ಕಾರ್ಯಕರ್ತರ ಜತೆ ಸಮಾಲೋಚನೆ ಮಾಡಿಕೊಂಡು ಬರುವಂತೆ ಸೂಚಿಸಲಾಗಿದೆ.
ಜನವರಿಗೆ ಮೊದಲು ನಮ್ಮ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಚುನಾವಣೆ ಕೆಲಸ ಆರಂಭಿಸುವಂತಿರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಶಾಸಕರು, ಸೋತ ಅಭ್ಯರ್ಥಿಗಳನ್ನು ಜತೆಯಲ್ಲಿ ಸೇರಿಸಿಕೊಂಡು ಗೆಲ್ಲುವ ಕಡೆ ಗಮನ ಹರಿಸಬೇಕು. ಅಗತ್ಯ ಕಾರ್ಯತಂತ್ರಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿ
ಸರ್ಕಾರ 5 ಗ್ಯಾರಂಟಿಗಳಲ್ಲಿ 4ನ್ನು ಜಾರಿ ಮಾಡಲಾಗಿದೆ. ಜನವರಿಯಿಂದ 5ನೇ ಗ್ಯಾರಂಟಿಯೂ ಜಾರಿಗೆ ಬರಲಿದೆ. ಪ್ರತಿ ಗ್ಯಾರಂಟಿಯಿಂದ ಕನಿಷ್ಠ 1.30 ಕೋಟಿ ಕುಟುಂಬಕ್ಕೆ ಅನುಕೂಲವಾಗಿದೆ. ಆದರೆ ಗ್ಯಾರಂಟಿಗಳಿಗೆ ತಳಮಟ್ಟದಲ್ಲಿ ಎಷ್ಟರ ಮಟ್ಟಿಗೆ ಪ್ರಚಾರ ಸಿಗಬೇಕಾಗಿತ್ತೋ ಅಷ್ಟರ ಮಟ್ಟಿಗೆ ಸಿಕ್ಕಿಲ್ಲ. ಸಚಿವರು, ಶಾಸಕರು ಆ ಬಗ್ಗೆ ಗಮನ ಹರಿಸಿ ಜನರಿಗೆ ತಲುಪಿಸಿ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಸೂಚನೆ ನೀಡಿದ್ದಾರೆ.
ಪಕ್ಷಕ್ಕೆ ಸೇರಿಸಿಕೊಳ್ಳಲು ತಡ ಮಾಡಬೇಡಿ
ಪಕ್ಷಕ್ಕೆ ಬರಲು ಸಿದ್ಧವಿರುವವರ ಪಟ್ಟಿ ದೊಡ್ಡದಾಗಿದೆ. ಹಾಲಿ ಶಾಸಕರ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವರು. ಉಳಿದಂತೆ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಬೇಗ ಬೇಗ ಸೇರಿಸಿಕೊಳ್ಳಿ. ತಡ ಮಾಡಿದಷ್ಟು ಪಕ್ಷದಲ್ಲಿ ಗೊಂದಲಗಳಾಗುತ್ತವೆ ಎಂಬ ಬಗ್ಗೆ ಸಿಎಂ ಸೂಚನೆ ನೀಡಿದ್ದಾರೆ.
ಅನಗತ್ಯ ಹೇಳಿಕೆ ಬೇಡ
ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಬೇರೆ ಬೇರೆಯವರು ಹೇಳಿಕೆ ನೀಡುತ್ತಿರುವುದನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಸ್ತಾಪ ಮಾಡಿದಾಗ ಸಿದ್ದರಾಮಯ್ಯ, ಯಾರೊಬ್ಬರು ಹೇಳಿಕೆಗಳನ್ನು ನೀಡುವುದು ಬೇಡ. ಸುಮ್ಮನೆ ಗೊಂದಲಗಳಾಗುತ್ತವೆ. ಮಾಧ್ಯಮಗಳ ಪ್ರಶ್ನೆ ಕೇಳಿದಾಕ್ಷಣ ಉತ್ತರ ನೀಡಲು ಹೋಗಬೇಡಿ, ಪ್ರತಿಪಕ್ಷಗಳು ನಮ್ಮ ಹೇಳಿಕೆಗಳನ್ನೇ ತಮಗೆ ಬೇಕಾದಂತೆ ಹೇಳಿಕೊಂಡು ತಿರುಗುತ್ತವೆ. ಅದಕ್ಕೆ ಆಸ್ಪದ ಕೊಡಬೇಡಿ ಎಂದಾಗ ಡಿಸಿಎಂ ಹಾಗೂ ಉಳಿದ ಸಚಿವರು ದನಿಗೂಡಿಸಿದರು.
ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯ ಹಾಗೂ ಡಿಕೆಶಿ ಎರಡು ಬಣಗಳಿವೆ: ಮಾಜಿ ಸಚಿವ ಶ್ರೀರಾಮುಲು
ಹಾಸನಾಂಬ ದೇಗುಲದ ಕಳಸ ಪ್ರತಿಷ್ಠಾಪನೆಗೆ ಕರಿಯಲಿಲ್ಲವೆಂದು ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಗರಂ