ವಿಮೆ ಹಣ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ 2 ಲಕ್ಷಕ್ಕೂ ಅಧಿಕ ದಂಡ: ಇಲ್ಲಿದೆ ವಿವರ..!

Gadag News: ಗದಗ: ಜಿಲ್ಲೆಯ ನರಗುಂದದ ಸುನೀಲ ದೋಂಗಡಿ ಎನ್ನುವವರು ಬೊಲೆರೋ ಪಿಕ್‍ಅಪ್ ವಾಹನಕ್ಕೆ ಹುಬ್ಬಳ್ಳಿಯ ವಿದ್ಯಾನಗರದ HDFC ಇರ್ಗೋ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ಆ ವಿಮೆ ಚಾಲ್ತಿಯಿರುವಾಗ 2019 ಸೆಪ್ಟೆಂಬರ್ 27 ರಂದು ವಾಹನ ನರಗುಂದದ ಹಿರೇಹಳ್ಳ ಹತ್ತಿರ ಅಪಘಾತಕ್ಕೀಡಾಗಿ ಜಖಂಗೊಂಡಿತ್ತು. ಆ ವಾಹನದ ದುರಸ್ತಿಗಾಗಿ 2,04,967 ರೂಪಾಯಿ ತಗಲುತ್ತದೆ ಎಂದು ಅಧಿಕೃತ ಸರ್ವಿಸ್ ಸೆಂಟರ್‌ನಿಂದ ಎಸ್ಟಿಮೇಷನ್ ಪಡೆದು, ಆ ಮೊತ್ತದ ಹಣ ಪರಿಹಾರವಾಗಿ ಕೊಡುವಂತೆ ವಿಮಾ ಕಂಪನಿಯವರಿಗೆ ಎಲ್ಲ ದಾಖಲೆಗಳ ಸಮೇತ ಕೋರಿಕೊಂಡಿದ್ದರು.

ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲ ಎನ್ನುವ ಕಾರಣ ಕ್ಲೇಮ್ ಅರ್ಜಿ ನಿರಾಕರಣೆ
ಅಪಘಾತ ಕಾಲಕ್ಕೆ ಆ ವಾಹನಕ್ಕೆ ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲ ಎನ್ನುವ ಕಾರಣ ನೀಡಿ ವಿಮಾ ಕಂಪನಿಯವರು ಸುನೀಲ್ ಅವರ ಕ್ಲೇಮ್ ತಿರಸ್ಕರಿಸಿದ್ದರು. ಅಪಘಾತವಾದ ನಂತರ ಆ ವಾಹನದ ಫಿಟ್‌ನೆಸ್ ಸರ್ಟಿಫಿಕೇಟ್ನ್ನು ಸುನೀಲ್ ನವೀಕರಿಸಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರೂ ವಿಮಾ ಕಂಪನಿಯವರು ಅವರ ಕ್ಲೇಮ‌್‌ನ್ನು ಒಪ್ಪಲಿಲ್ಲ. ಇದರಿಂದಾಗಿ ನೊಂದ ಸುನೀಲ್ ವಿಮಾ ಕಂಪನಿಯವರ ವಿರುದ್ದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಅಪಘಾತ ಕಾಲಕ್ಕೆ ಆ ವಾಹನಕ್ಕೆ ಅರ್ಹತಾ ಪತ್ರ ಇರಲಿಲ್ಲವಾದ್ದರಿಂದ ದೂರುದಾರ ಕ್ಲೇಮ್ ಪಡೆಯಲು ಅರ್ಹರಲ್ಲ ಎಂದು ಹೇಳಿ ಅವರ ದೂರನ್ನು ವಜಾ ಮಾಡುವಂತೆ ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು ವಾಹನದ ಮೇಲೆ ವಿಮೆ ಚಾಲ್ತಿಯಿದೆ. ಆ ವಾಹನ ಅಪಘಾತದಲ್ಲಿ ಜಖಂಗೊಂಡು ಹುಬ್ಬಳ್ಳಿಯ ಸುತಾರಿಯಾ ಅಟೋ ಸೆಂಟರ್‌ನಲ್ಲಿ ದುರಸ್ತಿಯಾಗಿದೆ.

ರಿಪೇರಿ ಮಾಡಿಸಲು ಮಾಲಿಕ ಸುನೀಲ್ 2,04,967 ರೂ ಖರ್ಚು ಮಾಡಿದ್ದಾರೆ. ಅಪಘಾತವಾದ ನಂತರ ದೂರುದಾರ ಗದಗ ಆರ್.ಟಿ.ಓ. ಕಛೇರಿಯಿಂದ ಅರ್ಹತಾ ಪತ್ರ ನವೀಕರಿಸಿರುವುದರಿಂದ ಕರ್ನಾಟಕ ಹೈ ಕೋರ್ಟ್ ತೀರ್ಪಿನನ್ವಯ ಅಪಘಾತ ಕಾಲಕ್ಕೆ ಆ ವಾಹನಕ್ಕೆ ಅರ್ಹತಾ ಪತ್ರ ಇತ್ತು ಎಂದು ಪರಿಗಣಿಸಬೇಕಾಗುತ್ತದೆ.

ಕಾರಣ ವಿಮಾ ಷರತ್ತಿನ ನಿಯಮದಂತೆ ವಾಹನ ದುರಸ್ತಿಗೆ ತಗುಲಿದ ವೆಚ್ಚವನ್ನು ಕೊಡುವುದು ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆ ರೀತಿ ವಿಮೆ ಹಣ ನೀಡಲು ವಿಮಾ ಕಂಪನಿಯವರು ನಿರಾಕರಿಸಿರುವುದರಿಂದ ಅವರ ನಡುವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.

ವಾಹನದ ದುರಸ್ತಿ ವೆಚ್ಚ ಹಾಗೂ ಅದರ ಮೇಲೆ ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರನಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಣ ಸಂದಾಯ ಮಾಡುವಂತೆ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ 25,000 ರೂ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ 10 ಸಾವಿರ ರೂ. ನೀಡುವಂತೆ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ಎಣ್ಣೆ’ ಹೊಡೆದಿದ್ದ ಇಲಿಯನ್ನು ಬಂಧಿಸಿದ ಪೊಲೀಸರು! ಅಚ್ಚರಿ ಎನಿಸಿದರೂ ಇದು ಸತ್ಯ!

ನಂ.1 ಬ್ಯಾಟರ್ ಶುಭಮನ್ಗೆ ಲವ್ಲಿಯಾಗಿ ಅಭಿನಂದಿಸಿದ ಸಾರಾ ತೆಂಡೂಲ್ಕರ್

‘ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ ‘

About The Author