Dharwad News: ಧಾರವಾಡ: ನವಲಗುಂದ : ತಾಲೂಕಿನ ಸರ್ಕಾರಿ ಶಾಲೆಯ ಪಠ್ಯಪುಸ್ತಕ ಹಂಚಿಕೆ ಅನುದಾನದಲ್ಲಿ ಅವ್ಯವಹಾರ ನಡೆದಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಸರ್ಕಾರಿ ಶಾಲೆ ಮಕ್ಕಳಿಗೆ ಶಾಲಾವಾರು ಪಠ್ಯ ಪುಸ್ತಕ ಹಂಚಿಕೆ ಮಾಡಲು 2018 ರಿಂದ 2021ರ ವರೆಗೆ ಸರ್ಕಾರದಿಂದ ರೂ.1,22,868 ಅನುದಾನ ಬಿಡುಗಡೆ ಮಾಡಲಾಗಿತ್ತು. ಪಠ್ಯ ಪುಸ್ತಕ ನೋಡಲ್ ಅಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಬಂದ ಅನುದಾನ ದುರ್ಬಳಕೆ ಮಾಡಿದ್ದಾರೆ ಎಂದು ತಾಲೂಕಿನ ಕೆಲವು ಹೋರಾಟಗಾರರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದಾಖಲೆ ಸಮೇತ ದೂರಿದ್ದಾರೆ.
ಸರ್ಕಾರದಿಂದ 2018ರಲ್ಲಿ ರೂ.22,490, 2019ರಲ್ಲಿ ರೂ.33,618, 2020ರಲ್ಲಿ ರೂ.32,888, 2021ರಲ್ಲಿ ರೂ.33,872 ಪಠ್ಯ ಪುಸ್ತಕ ಹಂಚಿಕೆಗಾಗಿ ಅನುದಾನ ಬಿಡುಗಡೆಯಾಗಿದೆ. ಆದರೆ ಪಠ್ಯ ಪುಸ್ತಕ ಹಂಚಿಕೆ ಸಮರ್ಪಕವಾಗಿ ಮಾಡದೇ ಅಧಿಕಾರಿಗಳು ಅನುದಾನವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಪಠ್ಯ ಪುಸ್ತಕ ವಿಲೇವಾರಿ ಮಾಡುವವರ ಹೆಸರಿಗೆ ಚೆಕ್ ನೀಡಬೇಕಾಗಿತ್ತು. ಆದರೆ ನೋಡಲ್ ಅಧಿಕಾರಿಯ ಹೆಸರಿನಲ್ಲಿ ಚೆಕ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿಂದಿನ ಉಪನಿರ್ದೇಶಕ ಗಜಾನನ ಮನ್ನಿಕೇರಿ ಅವರಿಗೆ ದೂರು ನೀಡಲಾಗಿತ್ತು. ಅವರು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈ ವರೆಗೂ ಯಾವುದೇ ಕ್ರಮವಾಗಿಲ್ಲ. 2018ರಲ್ಲಿ ನವಲಗುಂದದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆಗಿದ್ದವರು ಕಲಬುರಗಿಯ ಕಮಲಾಪುರದ ಶಾಲೆಯಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ನೋಡಲ್ ಅಧಿಕಾರಿ ಹುಬ್ಬಳ್ಳಿ ಗ್ರಾಮೀಣ ಭಾಗದ ಮಲ್ಲಿಗವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ದೂರುದಾರರ ಆರೋಪ.
ಸರ್ಕಾರಿ ಶಾಲೆ ಮಕ್ಕಳಿಗೆ ಶಾಲಾವಾರು ಹಂಚಿಕೆ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ, ಒಂದು ಶಾಲೆಗೂ ಪಠ್ಯ ಪುಸ್ತಕ ಹಂಚಿಕೆ ಮಾಡದೇ ಆ ಅನುದಾನ ತಮ್ಮ ವೈಯಕ್ತಿಕ ಬಳಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೆ 2018ರಿಂದ 2021ರ ವರೆಗೆ ಸರ್ಕಾರದಿಂದ ಬಂದಿರುವ ಪಠ್ಯ ಪುಸ್ತಕ ಹಂಚಿಕೆ ಅನುದಾನವನ್ನೇ ದುರ್ಬಳಕೆ ಮಾಡಕೊಂಡಿದ್ದಾರೆ. ಮೇಲಧಿಕಾರಿಗಳು ಅಧಿಕಾರಿಗಳು ಹಾಗೂ ಸ್ಥಳೀಯ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸತ್ಯ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಪೆನ್’ಡ್ರೈವ್ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ?’
ಕರ್ನಾಟಕ ಬಿಜೆಪಿಗೆ ದಕ್ಷಿಣ ಭಾರತದ ಭದ್ರಕೋಟೆಯಾಗಿ ಪರಿವರ್ತನೆಗೆ ಶ್ರಮ: ವಿಜಯೇಂದ್ರ ಯಡಿಯೂರಪ್ಪ




