Political News: ಹುಬ್ಬಳ್ಳಿ: ‘ರಾಮ ಮಂದಿರ ನಿರ್ಮಿಸಬಾರದು ಎನ್ನುವುದು ಕಾಂಗ್ರೆಸ್ ಹುನ್ನಾರ. ಸಿಎಂ ಸಿದ್ದರಾಮಯ್ಯ ಅವರು ಹಿಂದೂ-ಮುಸ್ಲಿಮ್ ನಡುವೆ ಬೆಂಕಿ ಹಚ್ಚುವ ಅಂಬಾಸಿಡರ್ ಇದ್ದಂತೆ. ಅದಕ್ಕಾಗಿ ರಾಜ್ಯದಲ್ಲಿ ಇಂತಹ ಗದ್ದಲ ನಡೆಯುತ್ತಿದೆ’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
1992ರಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಯನ್ನು ಬಂಧಿಸಿರುವುದನ್ನು ಖಂಡಿಸಿ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಶ್ರೀಕಾಂತ ಪೂಜಾರ ಬಂಧನ ಪೂರ್ವ ವಾರಂಟ್ ಮಾಡಿದ್ದರೆ? ಪೊಲೀಸ್ ದಾಖಲೆಯಲ್ಲಿ ಎಫ್.ಐ.ಆರ್. ಇದೆಯೇ, ದೂರು ಪ್ರತಿಗಳಿವೆಯೇ? ಕೋರ್ಟ್ ರಜೆ ಇದ್ದಾಗ ಆರೋಪಿಯನ್ನು ಬಂಧಿಸಬಾರದು ಎನ್ನುವ ನಿಯಮವಿದೆ. ಹಾಗಿದ್ದಾಗಲೂ ನೀವು ಯಾರ ನಿರ್ದೇಶನದ ಮೇಲೆ ಅವರನ್ನು ಬಂಧಿಸಿದ್ದೀರಿ? ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ 69 ಸಾವಿರ ಎಲ್.ಪಿ.ಆರ್. ಪ್ರಕರಣಗಳಿವೆ. ಈವರೆಗೆ ಎಷ್ಟು ಮಂದಿ ಆರೋಪಿಯನ್ನು ಬಂಧಿಸಿದ್ದೀರಿ. ರಾಮಮಂದಿರ ಉದ್ಘಾಟನೆ ಕಾಂಗ್ರೆಸ್’ಗೆ ಹೊಟ್ಟೆಉರಿ ಆಗುತ್ತಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದ ಚಿಂತನೆ ಆರಂಭವಾಗಿದೆ. ಅದಕ್ಕಾಗಿ ರಾಮ, ಆಂಜನೇಯ ಭಜನೆ ಮಾಡಬಾರದು ಎಂದು, ಮುಸ್ಲಿಮರನ್ನು ಓಲೈಸುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ಶ್ರೀಕಾಂತ ಅವರ ಮೇಲೆ ಎಂಟು ಕೇಸ್ ಇದೆಯಂತೆ. ಎಷ್ಟ ಬಾರಿ ಅವರು ಪೊಲೀಸ್ ಠಾಣೆಗೆ ಬಂದಿಲ್ಲ. ಠಾಣೆ ಎದುರಿಗೇ ಪ್ರತಿನಿತ್ಯ ಓಡಾಡುತ್ತಿದ್ದರು. ಆಗ ಯಾಕೆ ಅವರನ್ನು ಬಂಧಿಸಿಲ್ಲ? ರಾಹುಲ್, ಸೋನಿಯಾ ಗಾಂಧಿ ವಿರುದ್ಧ ಎಷ್ಟೆಲ್ಲ ಪ್ರಕರಣಗಳಿವೆ. ಅವರನ್ನು ಜೈಲಿಗೆ ಹಾಕುವಾಗ ಪ್ರತಿಭಟನೆ ನಡೆಸುತ್ತೀರ. ಆಟೊ ಓಡಿಸುವ ಶ್ರೀಕಾಂತನನ್ನು ಬಂಧಿಸುತ್ತೀರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಎಲ್.ಪಿ.ಆರ್. ಹುಬ್ಬಳ್ಳಿಗೆ ಮಾತ್ರ ಅನ್ವಯಿಸುತ್ತದೆಯೇ? ಬೇರೆಡೆಗೆ ಅದು ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದ ಅಶೋಕ, ‘ಕುಕ್ಕರ್ ಬಾಂಬ್ ಹಾಕುವವರನ್ನು ಬಿಡ್ತೀರಿ, ಆಟೊ ರಿಕ್ಷಾ ಓಡಿಸುವವರನ್ನು ಜೈಲಿಗೆ ಹಾಕ್ತೀರ. ಸಿದ್ದರಾಮಯ್ಯ ಅವರನ್ನು ಬ್ರದರ್ ಎಂದು ಭಯೋತ್ಪಾದಕನನ್ನು ತಬ್ಬಿಕೊಂಡರು. ಕಾಂಗ್ರೆಸ್’ಗೆ ಭಯೋತ್ಪಾದಕರು ಬ್ರದರ್ ಆಗಿದ್ದಾರೆ, ರಾಮಭಕ್ತರು ಅಪರಾಧಿಯಂತೆ ಕಾಣುತ್ತಾರೆ’ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿರುವ ಎಲ್ಲ ಕರಸೇವಕರನ್ನು ಹುಡುಕಬೇಕು ಎಂದು ಸಿದ್ದರಾಮಯ್ಯ ಪೊಲೀಸರಿಗೆ ಹೇಳಿದ್ದಾರೆ. ಮಙದಿರ ಉದ್ಘಾಟನೆ ದಿನ ಯಾರೂ ಮನೆಯಲ್ಲಿ ಜ್ಯೋತಿ ಹಚ್ಚಬಾರದು ಎಂದು ಹೀಗೆ ಮಾಡುತ್ತಿದ್ದಾರೆ. ನಾನೂ ಕರಸೇವಕನೆ. ನನ್ನ ಮೇಲೂ ಎಲ್.ಪಿ.ಆರ್ ಇದೆ. ಉಡಿಯೂರಪ್ಪರ ಮೇಲೂ ಇದೆ. ತಾಕತ್ತಿದ್ದರೆ ಬಂಧಿಸಿ. ರಾಮನನ್ನು ಕೆಣಕಿದ ಯಾರನ್ನೂ ಹನುಮಂತ ಬಿಟ್ಟಿಲ್ಲ. ಬಿಡೋದೂ ಇಲ್ಲ. ಬಹಳ ದಿನ ನಿಮ್ಮ ಸರ್ಕಾರ ಸಹ ಇರಲ್ಲ. ಟಿಪ್ಪು ಒಬ್ಬ ಮತಾಂಧ. ಆ ಸಂಸ್ಕೃತಿ ನಿಮ್ಮಲ್ಲಿ ಬಂದು ಬಿಟ್ಟಿದೆ. ಟಿಪ್ಪು ಹಿಂದೆ ಹೋದವರ ಕಥೆಯೆಲ್ಲ ಸರ್ವನಾಶವಾಗಿದೆ. ಎಚ್ಚರವಿರಲಿ’ ಎಂದರು.
‘ಶ್ರೀಕಾಂತ ಅವರನ್ನು ಬಂಧಿಸಿದ ಇನ್’ಸ್ಪೆಕ್ಟರ್ ಅವರನ್ನು ವರ್ಗಾಯಿಸಲಾಗಿದೆ ಎನ್ನುವ ಮಾಹಿತಿಯಿದೆ. ನಮಗೆ ವರ್ಗಾವಣೆ ಬೇಕಿಲ್ಲ. ಕೂಡಲೇ ಅವರನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಯಲಿದೆ’ ಎಂದು ಎಚ್ಚರಿಸಿದರು.
‘ಹುಬ್ಬಳ್ಳಿಯಲ್ಲಿ ನಡೆದ ಎಲ್ಲ ಹೋರಾಟಗಳು ಯಶಸ್ವಿಯಾಗಿದೆ. ಸರ್ಕಾರದ ಮಾತು ಕೇಳುವ ಬದಲು ಪೊಲೀಸರು ವಿಚಾರ ಮಾಡಬೇಕು. ಮುಂದೆ ನಮ್ಮ ಸರ್ಕಾರ ಬರುತ್ತದೆ. ನೀವೇನು ಒಂದೇ ಜಾಗದಲ್ಲಿ ಕೆಲಸ ಮಾಡುವವರಲ್ಲ. ನಮ್ಮ ಹೋರಾಟ ನಿರಂತರವಾಗಿರಲಿದೆ. ರಾಮ ಭಕ್ತರನ್ನ ಕೆಣಕಿ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ’ ಎಂದು ಹೇಳಿದರು.
ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..
ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ: ಪೊಲೀಸರಿಗೆ ಆರ್.ಅಶೋಕ್ ಎಚ್ಚರಿಕೆ