Hubli News: ಕೇಂದ್ರ ಸರಕಾರ ರಾಜ್ಯಕ್ಕೆ ನರೇಗಾ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಈ ಸಮಸ್ಯೆ ಆಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಅಂಥದ್ಯಾವುದೂ ನಡೆದಿಲ್ಲ ಅನ್ನೋದು ಕೇಂದ್ರದ ವಾದ. ಇನ್ನು ಈ ಬಗ್ಗೆ ಧಾರವಾಡ ಜಿ.ಪಂ. ಸಿಇಒ ಸ್ವರೂಪ ಟಿ.ಕೆ. ಅವರನ್ನು ಕೇಳಿದರೆ, ಈಗಾಗಲೇ ಅನುದಾನ ಬಿಡುಗಡೆಯಾಗಿದೆ ಅನ್ನೋ ಮಾಹಿತಿ ಇದೆ. ಅದು ಬರುತ್ತಲೇ ಎಲ್ಲರಿಗೂ ಕೂಲಿ ನೀಡಲಾಗುವುದು ಅನ್ನುತ್ತಾರೆ.
ರಾಜ್ಯದಲ್ಲಿ ಈ ಬಾರಿ ಭಾರೀ ಬರ ಬಂದಿದೆ. ಈ ಬರ ಇದೀಗ ಬಡವರ ಜೀವ ಹಿಂಡುತ್ತಿದೆ. ತುತ್ತು ಕೂಳಿಗೂ ಬಡ ಜನರು ಪರದಾಡುತ್ತಿದ್ದಾರೆ. ಬರದಿಂದಾಗಿ ಕೃಷಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಇನ್ನೊಂದು ಕಡೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಿಗಬೇಕಾಗಿರೋ ಕೂಲಿಯೇ ಸಿಗುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಈ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿಯೇ ಪಾವತಿಯಾಗಿಲ್ಲ
ನರೇಗಾ ಅಡಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದ ನಿರ್ಲಕ್ಷ್ಯದ ಪರಮಾವಧಿ ಧಾರವಾಡದಲ್ಲಿ ಕಂಡು ಬಂದಿದೆ. ಜಿಲ್ಲೆಯ ಎಲ್ಲ ಎಂಟು ತಾಲೂಕುಗಳನ್ನು ಸರಕಾರ ಬರಪೀಡಿತ ಅಂತಾ ಘೋಷಿಸಿದೆ. ಇಂಥ ಸಂದರ್ಭದಲ್ಲಿ ತಮಗೆ ಕೆಲಸ ಸಿಕ್ಕಿತಲ್ಲ ಎಂದು ಹುಮ್ಮಸ್ಸಿನಿಂದ ನರೇಗಾದಡಿ ಸಾವಿರಾರು ಕಾರ್ಮಿಕರು ಕೆಲಸ ಮಾಡಿದ್ದಾರೆ. ಆದರೆ ಈ ಯೋಜನೆಯಡಿ ದುಡಿದ ಕಾರ್ಮಿಕರಿಗೆ ಸರಕಾರ 2023 ರ ಡಿ. 6 ರಿಂದ ಇಲ್ಲಿಯವರೆಗೆ ಒಂದು ಪೈಸೆಯ ಕೂಲಿಯನ್ನೇ ನೀಡಿಲ್ಲ. ಇದರಿಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ 6.51 ಕೋಟಿ ರೂಪಾಯಿ ಕೂಲಿ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಕುಟುಂಬ ನಿರ್ವಹಣೆಗೆ ಕೂಲಿ ಮಾಡಿದರೂ ಕಾರ್ಮಿಕ ವರ್ಗ ಸಾಲದ ಸುಳಿಗೆ ಸಿಲುಕುವಂತಾಗಿದೆ. ಇನ್ನು 122 ವರ್ಷಗಳಲ್ಲಿ ಮೂರು ಭೀಕರ ಬರಗಳ ಪೈಕಿ ಈ ವರ್ಷದ್ದೂ ಒಂದಾಗಿದೆ. ಇಂಥ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರ ಸಹಾಯಕ್ಕೆ ಸರಕಾರಗಳು ಮುಂದೆ ಬರದಿದ್ದರೆ ಅವರ ಬದುಕಿನ ಕಥೆ ಏನು ಅನ್ನೋದು ಕಾರ್ಮಿಕ ಮುಖಂಡರ ಪ್ರಶ್ನೆ.
ಬರಗಾಲದಲ್ಲಿ ದುಡಿಯುವ ವರ್ಗಕ್ಕೆ ಕನಿಷ್ಠ 150 ದಿನ ಕೆಲಸ ನೀಡಬೇಕೆಂದು ಘೋಷಿಸಿರೋ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನರೇಗಾ ಕೆಲಸಕ್ಕೆ ದಿನಕ್ಕೆ ಒಬ್ಬರಿಗೆ 316 ರೂಪಾಯಿ ಕೂಲಿ ನಿಗದಿಪಡಿಸಿವೆ. ಇದಕ್ಕೆ ಪೂರಕವಾಗಿ ಬದು, ಶೆಡ್ ನಿರ್ಮಾಣ, ನಾಲೆ, ಕೆರೆ ಹೂಳೆತ್ತುವುದು ಸೇರಿದಂತೆ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿವೆ. ಆರಂಭದಲ್ಲಿ ಜನ ಉತ್ಸಾ ಹದ ಜತೆಗೆ ಅನಿವಾರ್ಯವಾಗಿ ಕೆಲಸ ಮಾಡಿ ದ್ದಾರೆ. ಆದರೆ 2 ತಿಂಗಳಿಂದ ಕೂಲಿ ಸಿಗದೇ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಕೇಂದ್ರ ಸರಕಾರ ನಾವು ರಾಜ್ಯಕ್ಕೆ ಅನುದಾನ ಕೊಟ್ಟಿದ್ದೇವೆ ಎಂದು ಪ್ರತಿಪಾದಿಸುತ್ತಿದ್ದರೆ, ರಾಜ್ಯ ಸರಕಾರ ತಮಗೆ ಹಣ ನೀಡದ ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ವಾದಿಸುತ್ತಿದೆ. ಆದರೆ ಇಲ್ಲಿ ನರೇಗಾದಲ್ಲಿ ದುಡಿದ ಕಾರ್ಮಿಕರಿಗೆ ಗರಿಷ್ಠ 15 ದಿನದೊಳಗೆ ಕೂಲಿ ಪಾವತಿಸಬೇಕೆಂಬ ನಿಯಮ ಇದ್ದರೂ ಪಾಲನೆ ಆಗುತ್ತಿಲ್ಲ. ಇಲ್ಲಿ ನಿಜವಾಗಿ ಅನ್ಯಾಯ ಆಗುತ್ತಿರುವುದು ನಮಗೆ ಅನ್ನೋದು ಕಾರ್ಮಿಕರ ನೋವಿನ ಮಾತು.
ಇನ್ನು ಈ ಬಗ್ಗೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಸ್ವರೂಪ ಟಿ.ಕೆ. ಅವರನ್ನು ಕೇಳಿದರೆ, ಈಗಾಗಲೇ ಅನುದಾನ ಬಿಡುಗಡೆಯಾಗಿದೆ ಅನ್ನೋ ಮಾಹಿತಿ ಇದೆ. ಅದು ಬರುತ್ತಲೇ ಎಲ್ಲರಿಗೂ ಕೂಲಿ ನೀಡಲಾಗುವುದು ಅನ್ನುತ್ತಾರೆ.
ಕೇಂದ್ರ ಸರಕಾರ ರಾಜ್ಯಕ್ಕೆ ನರೇಗಾ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಈ ಸಮಸ್ಯೆ ಆಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಅಂಥದ್ಯಾವುದೂ ನಡೆದಿಲ್ಲ, ಎಲ್ಲ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಅನ್ನೋದು ಕೇಂದ್ರದ ವಾದ. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಕೇಂದ್ರ-ರಾಜ್ಯ ಸರಕಾರಗಳ ನಡುವೆ ಈ ಕೂಲಿ ಕಾರ್ಮಿಕರು ಅನಾಥರಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
ಸತ್ಯಪಾಲ್ ಮಲಿಕ್ ನಿವಾಸದ ಮೇಲೆ ಸಿಬಿಐ ರೇಡ್: ಇದು ಬಿಜೆಪಿಗರ ಕುಟಿಲ ಕಾರಸ್ತಾನವೆಂದ ಸಿಎಂ ಸಿದ್ದರಾಮಯ್ಯ
ಈ ದೇವರನ್ನು ನಂಬಿದ್ದಕ್ಕೆ ನನ್ನ ಪತಿ ಚುನಾವಣೆಯಲ್ಲಿ ಗೆದ್ದಿದ್ದರು: ಭವಾನಿ ರೇವಣ್ಣ
ನಾನು ಕಾಣಿಸಿಕೊಳ್ಳದ್ದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿದರು: ಭವಾನಿ ರೇವಣ್ಣ




