www.karnatakatv.net ಮಂಡ್ಯ : ಮಂಡ್ಯದ ಹಿರಿಯ ಮುತ್ಸದ್ದಿ ಎಚ್.ಡಿ.ಚೌಡಯ್ಯ ಅವರ ನೇತೃತ್ವದಲ್ಲಿ ಸೋಮವಾರ ಮಾನ್ಯ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಾಯಿತು ಪಕ್ಷಾತೀತವಾದ ಈ ಭೇಟಿಯಲ್ಲಿ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಕೂಡ ಭಾಗಿ ಆಗಿದ್ದರು. ಮುಖ್ಯಮಂತ್ರಿಗಳ ಜತೆ ಈ ನಿಯೋಗವು ಪ್ರಮುಖವಾಗಿ ಎರಡು ವಿಷಯಗಳನ್ನು ಚರ್ಚಿಸಲಾಯಿತು. ಮೈಷುಗರ್ ಕಾರ್ಖಾನೆಯನ್ನು ಶೀಘ್ರದಲ್ಲೇ ಪುನರ್ ಆರಂಭಿಸಲು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಮನವಿ ಮಾಡಲಾಯಿತು. ಅಲ್ಲದೇ, ಬೆಳೆದು ನಿಂತಿರುವ ಬೆಳೆಗಾಗಿ ಕೆಆರ್ಎಸ್ನಿಂದ ನಾಲೆಗಳಿಗೆ ನೀರು ಹರಿಸುವಂತೆ ಕೇಳಿಕೊಳ್ಳಲಾಯಿತು.
ಈ ಎರಡೂ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ತಿಂಗಳು 24 ರಂದು ನೀರು ಬಿಡುವ ವಿಚಾರವಾಗಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದಲ್ಲಿ ಮೈಷುಗರ್ ಕಾರ್ಖಾನೆ ನಡೆಸೋದು ಕಷ್ಟ – ಯಡಿಯೂರಪ್ಪ

ಮೈಷುಗರ್ ಕಾರ್ಖಾನೆ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ನಡೆಸುವುದು ಕಷ್ಟ ಎನ್ನುವ ಮಾತುಗಳನ್ನು ಆಡಿದ್ದಾರೆ. ಈ ಕುರಿತು ನಿಯೋಗಕ್ಕೆ ಮನದಟ್ಟು ಮಾಡಿದ್ದಾರೆ. ರೈತರಿಗೆ ಕೂಡಲೇ ಸ್ಪಂದಿಸಬೇಕು ಎನ್ನುವ ಮನವಿಗೆ, ನಿಯೋಗ ಸ್ಪಂದಿಸುವುದಾದರೆ, ಓ ಅಂಡ್ ಎಮ್ ಆಧಾರದಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತರ ಹಿತದೃಷ್ಟಿಯಿಂದ ಬೇಗನೆ ಸಕ್ಕರೆ ಕಾರ್ಖಾನೆಯನ್ನು ಶುರು ಮಾಡುವಂತೆ ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿಕೊಂಡರು. ರೈತರ ಸಂಕಷ್ಟವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿಕೊಟ್ಟರು.
ಈ ಎರಡೂ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಈ ಸಮಸ್ಯೆಯು ಬಗೆಹರಿಯುತ್ತಿದೆ ಎಂಬ ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ




